ಬೆಂಗಳೂರು, ಏ. 12(DaijiworldNews/AK): ಮೈಸೂರಿನ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ, ಮಂಡ್ಯ, ಚಾಮರಾಜನಗರ ಕ್ಷೇತ್ರವನ್ನು ಒಳಗೊಂಡ ದೊಡ್ಡ ಚುನಾವಣಾ ಪ್ರಚಾರ ಸಭೆಯನ್ನು ಇದೇ 14ರಂದು ಸಂಜೆ 4 ಗಂಟೆಗೆ ಮೈಸೂರಿನ ಮಹಾರಾಜರ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ವಿವರಿಸಿದರು.
ವಿಶ್ವ ಮೆಚ್ಚಿದ ನಾಯಕ ಮೋದಿಯವರು ಸಾಂಸ್ಕಂತಿಕ ನಗರಿ ಮೈಸೂರಿಗೆ ಬರುತ್ತಿದ್ದು, ಈ ಭಾಗದ ಲೋಕಸಭಾ ಕ್ಷೇತ್ರಗಳಲ್ಲಿ ದೊಡ್ಡ ಶಕ್ತಿ ತಂದುಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಮತ್ತು ಮಂಡ್ಯದ ಎನ್ಡಿಎ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ- ಜೆಡಿಎಸ್ ಹಿರಿಯ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಈಗಾಗಲೇ 3 ಕ್ಷೇತ್ರಗಳಲ್ಲಿ ಎನ್ಡಿಎ ಪರ ಅಲೆ ಇದೆ. ಪ್ರಧಾನಿಯವರ ಭೇಟಿಯಿಂದ ಗೆಲುವಿನ ಅಂತರ ಇನ್ನಷ್ಟು ಹೆಚ್ಚಾಗಲಿದೆ ಎಂದು ಅವರು ಹೇಳಿದರು. ದೊಡ್ಡ ಅಂತರದ ಗೆಲುವು ನಮ್ಮದಾಗಲಿದೆ ಎಂದು ತಿಳಿಸಿದರು. ಬಿಜೆಪಿ- ಜೆಡಿಎಸ್ ಪಕ್ಷಗಳ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಗುರುಪಾದಸ್ವಾಮಿ ಅವರು ಮೋದಿಯವರ ನಾಯಕತ್ವಕ್ಕೆ ಮೆಚ್ಚುಗೆ ಸೂಚಿಸಿ ಅವರನ್ನು ಬೆಂಬಲಿಸಿ, ಯಾವುದೇ ಷರತ್ತು ಇಲ್ಲದೆ ಬಿಜೆಪಿ ಸೇರಿದ್ದಾರೆ ಎಂದು ತಿಳಿಸಿದರು.ಪಕ್ಷಕ್ಕೆ ದೊಡ್ಡ ಶಕ್ತಿ ತಂದುಕೊಟ್ಟಿದೆ ಎಂದರು.
ಕಾಂಗ್ರೆಸ್ ಮುಖಂಡರು ಹತಾಶರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ಸಿನವರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಚುನಾವಣೆಯಲ್ಲಿ 18- 20 ಸ್ಥಾನ ಗೆಲ್ಲುವ ಭ್ರಮೆಯಲ್ಲಿದ್ದ ಕಾಂಗ್ರೆಸ್ ಪಕ್ಷದವರಿಗೆ ಈಗ ಜ್ಞಾನೋದಯವಾಗಿ, ವಾಸ್ತವಿಕ ಪರಿಸ್ಥಿತಿ ಅರ್ಥವಾಗುತ್ತಿದೆ. ಬಿಜೆಪಿ- ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಾಗಿ, ಒಂದಾಗಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುನ್ನುಗ್ಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಹಲ್ಲೆಯಂಥ ಘಟನೆಗಳಿಂದ ನಮಗೆ ಹಿನ್ನಡೆ ಆಗುವುದಿಲ್ಲ ಎಂದು ತಿಳಿಸಿದರು.
ನಗರ ಜಿಲ್ಲಾಧ್ಯಕ್ಷ ನಾಗೇಂದ್ರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್. ಆರ್. ಮಹದೇವಸ್ವಾಮಿ, ಶಾಸಕ ಶ್ರೀವತ್ಸ ಮುಂತಾದವರು ಉಪಸ್ಥಿತರಿದ್ದರು.