ತಮಿಳುನಾಡು, ಏ. 12(DaijiworldNews/AA): ಪ್ರಸ್ತುತ ಮಹಿಳೆಯರು ಮದುವೆಯಾಗಿಯೂ ವಿದ್ಯಾಭ್ಯಾಸ ಮಾಡುವುದು, ಉದ್ಯೋಗಕ್ಕೆ ತೆರಳುತ್ತಾರೆ. ಈ ಮೂಲಕ ಇತರ ಮಹಿಳೆಯರಿಗೆ ಮಾದರಿ ಎಂದೆನಿಸಿಕೊಳ್ಳುತ್ತಾರೆ. ಹೀಗೆ ಕೇವಲ 14 ನೇ ವಯಸ್ಸಿಗೆ ಮದುವೆಯಾಗಿ, 18 ವರ್ಷದೊಳಗೆ ಇಬ್ಬರು ಹೆಣ್ಣುಮಕ್ಕಳ ತಾಯಿಯಾದರೂ ಯುಪಿಎಸ್ ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾದ ಎನ್. ಅಂಬಿಕಾ ಅವರ ಯಶೋಗಾಥೆ ಇದು.
ಎನ್. ಅಂಬಿಕಾ ಅವರು ಮೂಲತಃ ತಮಿಳುನಾಡಿನವರು. 14 ನೇ ವಯಸ್ಸಿಗೆ ಮದುವೆಯಾಗಿದ್ದ ಅಂಬಿಕಾ ಅವರ ಪತಿ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು. 18 ನೇ ವಯಸ್ಸಿನೊಳಗೆ ಎರಡು ಹೆಣ್ಣುಮಕ್ಕಳ ತಾಯಿಯಾದ ಅಂಬಿಕಾ ಅವರು ತಮ್ಮ ಪತಿಯೊಂದಿಗೆ ಸುಖವಾಗಿದ್ದರು. ಹೀಗಿರುವಾಗ ಒಂದು ದಿನ ಪತಿಯೊಂದಿಗೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ತೆರಳಿದಾಗ, ಅಲ್ಲಿ ಪತಿ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆದ ದೃಶ್ಯ ಅವರ ಮನಸ್ಸಿನಲ್ಲಿ ಉಳಿಯುತ್ತದೆ.
ತಾನೂ ಕೂಡ ಉನ್ನತ ಅಧಿಕಾರಿಯಾಗಬೇಕೆಂದು ನಿರ್ಧರಿಸಿದ ಅಂಬಿಕಾ 10 ನೇ ತರಗತಿಯನ್ನು ಪೂರ್ಣಗೊಳಿಸುತ್ತಾರೆ.
ಆ ಬಳಿಕ ಪಿಯು ಪದವಿ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ.
ಪದವಿ ಶಿಕ್ಷಣ ಮುಗಿದ ಬಳಿಕ ಅಂಬಿಕಾ ಅವರು ಯುಪಿಎಸ್ ಸಿ ಪರಿಕ್ಷೆ ಬರೆಯಲು ನಿರ್ಧಾರ ಮಾಡುತ್ತಾರೆ. ಆದರೆ ತಾವು ವಾಸಿಸಿತ್ತಿದ್ದ ಪ್ರದೇಶದಲ್ಲಿ ಯಾವುದೇ ತರಬೇತಿ ಕೇಂದ್ರಗಳಿರಲಿಲ್ಲ. ತರಬೇತಿ ಪಡೆಯಲು ಅವರು ಚೆನ್ನೈಗೆ ತೆರಳಬೇಕಿತ್ತು. ತರಬೇತಿಗಾಗಿ ಚೆನ್ನೈಗೆ ತೆರಳಲು ನಿರ್ಧರಿಸಿದ ಅಂಬಿಕಾ ಅವರಿಗೆ ಮಕ್ಕಳನ್ನು ಬಿಟ್ಟು ಚೆನ್ನೈಗೆ ತೆರಳುವುದು ಕಷ್ಟವಾಗಿತ್ತು. ಆದರೆ ಅಂಬಿಕಾ ಅವರಿಗೆ ಪತಿ ಬೆಂಬಲ ನೀಡುತ್ತಾರೆ.
ಅಂಬಿಕಾ ಅವರು ಮೂರು ಬಾರಿ ಯುಪಿಎಸ್ ಸಿ ಪರೀಕ್ಷೆ ಬರೆದು ಅನುತ್ತೀರ್ಣರಾಗುತ್ತಾರೆ. ಆಗ ಪತ್ತಿ ಅಂಬಿಕಾರಿಗೆ ಮನೆಗೆ ಮರಳಲು ವಿನಂತಿಸುತ್ತಾರೆ. ಆದರೆ ನಾಲ್ಕನೇ ಬಾರಿಗೆ ಪರೀಕ್ಷೆ ಬರೆಯುವುದಾಗಿ ಪತಿಯಲ್ಲಿ ಕೇಳಿಕೊಂಡ ಅಂಬಿಕಾ 2008ರಲ್ಲಿ ಮತ್ತೆ ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ನಾಲ್ಕನೇ ಬಾರಿಗೆ ಅಂಬಿಕಾ ಅವರು ಉತ್ತಿರ್ಣರಾಗುವಲ್ಲಿ ಸಫಲರಾಗುತ್ತಾರೆ. ಈ ಮೂಲಕ ತಮ್ಮ ಐಪಿಎಸ್ ಅಧಿಕಾರಿಯಾಗುವ ಕನಸನ್ನು ನನಸು ಮಾಡಿಕೊಳ್ಳುತ್ತಾರೆ.