ಬೆಂಗಳೂರು, ಏ 11 (DaijiworldNews/AA): ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಹತಾಶಗೊಂಡಿದ್ದು, ಸೋಲಿನ ಭಯದಲ್ಲಿ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ ಎಂದು ಶಾಸಕ ಡಾ. ಅಶ್ವಥ್ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮತದಾರರ ವೈಯಕ್ತಿಕ ಮಾಹಿತಿ ತೆಗೆದುಕೊಂಡು ಅರ್ಜಿ ಪಡೆದು ಕಾರ್ಡ್ ನೀಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಮತದಾರರನ್ನು ಸೆಳೆಯಲು ಆಮಿಷ ಒಡ್ಡುತ್ತಿದೆ. ಜೊತೆಗೆ ಅಧಿಕಾರಿಗಳ ದುರ್ಬಳಕೆಯಾಗುತ್ತಿದೆ. ಇದನ್ನು ತಡೆಯಲು ಚುನಾವಣಾ ಆಯೋಗಕ್ಕೆ ಮಾನವಿ ಮಾಡಿದ್ದೇನೆ ಎಂದು ತಿಳಿಸಿದರು.
ಇನ್ನು ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾವು ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿದ್ದಕ್ಕೆ ಕಾಂಗ್ರೆಸ್ ನವರು ವಿಲವಿಲ ಎಂದು ಒದ್ದಾಡಿದ್ದಾರೆ. ಒಕ್ಕಲಿಗ ಸಮುದಾಯ, ಬಿಜೆಪಿ- ಜೆಡಿಎಸ್ ಜೊತೆ ಹೋಗುತ್ತದೆ ಎಂಬ ಭಯದಿಂದ ಸರ್ಕಾರ ಬೀಳಿಸಿದವರು ಎಂಬ ನಿರಾಧಾರ ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.