ನವದೆಹಲಿ, ಏ 11 (DaijiworldNews/AA): ಚುನಾವಣಾ ಬಾಂಡ್ ಗೆ ಸಂಬಂಧ ಪಟ್ಟಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯ (ಆರ್ಟಿಐ) ಅಡಿಯಲ್ಲಿ ನೀಡಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ನಿರಾಕರಿಸಿದ್ದು, ಈ ವಿವರಗಳು ಪರಸ್ಪರ ವಿಶ್ವಾಸಕ್ಕೆ ಸಂಬಂಧಿಸಿರುವುದು ಎಂದು ತಿಳಿಸಿದೆ.
ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಹಾಗೂ 2019ರ ಏಪ್ರಿಲ್ 12ರಿಂದ ಖರೀದಿಸಲಾದ ಚುನಾವಣಾ ಬಾಂಡ್ ಗಳ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಎಸ್ ಬಿಐಗೆ ಸುಪ್ರೀಂ ಸೂಚನೆ ನೀಡಿತ್ತು. ಹಾಗೂ ಎಸ್ ಬಿಐ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಿವರಗಳನ್ನು ಆಯೋಗವು ವೆಬ್ಸೈಟ್ನಲ್ಲಿ ಪ್ರಕಟಿಸಬೇಕು ಎಂದು ಆದೇಶ ನೀಡಿತ್ತು.
ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರವನ್ನು, ಚುನಾವಣಾ ಆಯೋಗಕ್ಕೆ ಸಲ್ಲಿಸಿದ ರೀತಿಯಲ್ಲಿ ಡಿಜಿಟಲ್ ರೂಪದಲ್ಲಿ ನೀಡಬೇಕು ಎಂದು ಎಸ್ಬಿಐಗೆ ಆರ್ಟಿಐ ಅಡಿ ಆರ್ಟಿಐ ಕಾರ್ಯಕರ್ತ ಕಮಡೋರ್ (ನಿವೃತ್ತ) ಲೋಕೇಶ್ ಬಾತ್ರಾ ಅವರು ಮನವಿ ಮಾಡಿಕೊಂಡಿದ್ದರು. ಆದರೆ, ಮಾಹಿತಿ ಬಹಿರಂಗಕ್ಕೆ ವಿನಾಯಿತಿ ನೀಡಿರುವ ಆರ್ಟಿಐ ಕಾಯ್ದೆಯ ಸೆಕ್ಷನ್ 8ನ್ನು ಉಲ್ಲೇಖಿಸಿ ಎಸ್ ಬಿಐ ಮಾಹಿತಿ ನೀಡಲು ನಿರಾಕರಿಸಿದೆ.
ಇನ್ನು ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಎಸ್ ಬಿಐ "ನೀವು ಕೋರಿರುವ ಮಾಹಿತಿಯು ಬಾಂಡ್ ಖರೀದಿ ಮಾಡಿದವರು ಹಾಗೂ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದೆ. ಇವು ಪರಸ್ಪರ ವಿಶ್ವಾಸವನ್ನು ಆಧರಿಸಿವೆ. ಹೀಗಾಗಿ, ಇವುಗಳ ಮಾಹಿತಿಯನ್ನು ಆರ್ಟಿಐ ಅಡಿ ನೀಡುವುದಕ್ಕೆ ಸೆಕ್ಷನ್ 8(1) (ಇ) ಹಾಗೂ (ಜೆ) ಅಡಿಯಲ್ಲಿ ವಿನಾಯಿತಿ ಇದೆ" ಎಂದು ಹೇಳಿದೆ.