ಶ್ರೀನಗರ, ಏ 11 (DaijiworldNews/AA): ಲಷ್ಕರ್-ಎ-ತಯಬಾಗೆ ಸೇರಿದ್ದ ಮೂವರು ಉಗ್ರರ ಸಹಚರರನ್ನು ಬಂಧಿಸಿ, ಬಂಧಿತರಿಂದ 3 ಹ್ಯಾಂಡ್ ಗ್ರನೇಡ್ ಗಳನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದ ಘಟನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಬಂಧಿತರನ್ನು ಓವೈಸಿ ಅಹಮದ್ ವಾಜಾ, ಬಸಿತ್ ಫಯಾಜ್ ಕಾಲೋ ಮತ್ತು ಫಹೀಮ್ ಅಹಮದ್ ಮಿರ್ ಎಂದು ಗುರುತಿಸಲಾಗಿದೆ.
ಭದ್ರತಾ ಪಡೆಯನ್ನು ಗುರಿಯಾಗಿಸಿ ಬಾರಾಮುಲ್ಲಾದಲ್ಲಿ ನಿಷೇಧಿತ ಎಲ್ ಇಟಿ ಸಂಘಟನೆಯ ಕೆಲ ಉಗ್ರರ ಚಲನವಲನಗಳು ಇರುವ ಬಗ್ಗೆ ಭದ್ರತಾ ಸಿಬ್ಬಂದಿಗೆ ಮಾಹಿತಿ ಬಂದ ಹಿನ್ನೆಲೆ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಮೂವರು ಉಗ್ರರ ಸಹಚರರನ್ನು ವಶಕ್ಕೆ ಪಡೆಯಲಾಗಿದೆ. ಹಾಗೂ ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವಕ್ತಾರರು ಮಾಹಿತಿ ನೀಡಿದ್ದಾರೆ.
ಇನ್ನು ಬಂಧಿತರು ಭದ್ರತಾ ಪಡೆ ಅಧಿಕಾರಿಗಳ ಕುರಿತು ತಮ್ಮ ತಂಡಕ್ಕೆ ಮಾಹಿತಿ ನೀಡುತ್ತಿದ್ದರು. ಹಾಗು ಮುಂಬರುವ ಲೋಕಸಭಾ ಚುನಾವಣೆ ವೇಳೆ ಬಾರಾಮುಲ್ಲಾದಲ್ಲಿ ಅಹಿತಕರ ಘಟನೆಗಳು ನಡೆಸಲು ಸಂಚು ರೂಪಿಸಿರುವುದಾಗಿ ಶಂಕೆ ವ್ಯಕ್ತಪಡಿಸಲಾಗಿದೆ.