ಬೆಂಗಳೂರು, ಏ 11(DaijiworldNews/AK):ಗೃಹಲಕ್ಷ್ಮಿ ಯೋಜನೆಯ ಹಣವು ವಿದ್ಯಾಭ್ಯಾಸಕ್ಕೆ ನೆರವಾಯಿತು ಎಂದಿದ್ದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ವೇದಾಂತ್ ನಾವಿ ಅವರ ಹೇಳಿಕೆಯ ವಿಡಿಯೋ ಹಂಚಿಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕಿರು ವಿಡಿಯೋ ಹಂಚಿಕೊಂಡಿರುವ ರಾಜ್ಯ ಕಾಂಗ್ರೆಸ್, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ವಿವಿಧ ರೀತಿಯಲ್ಲಿ ಆಸರೆಯಾಗಿರುವುದನ್ನು ಕಂಡು ಸಾರ್ಥಕ ಭಾವ ಮೂಡುತ್ತಿದೆ. ಕೇವಲ ಹತ್ತು ತಿಂಗಳಲ್ಲಿ ನಮ್ಮ ಯೋಜನೆಯಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಪರಿಣಾಮಕಾರಿ ಬದಲಾವಣೆ ತರುತ್ತಿರುವುದು ಹೆಮ್ಮೆಯ ಸಂಗತಿ ಎಂದಿದೆ.
ತಂದೆಯನ್ನು ಕಳೆದುಕೊಂಡ ದ್ವಿತೀಯ ಪಿಯುಸಿಯ ಕಲಾ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವೇದಾಂತ್ ಕುಟುಂಬಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣ ಶಿಕ್ಷಣ ಪಡೆಯಲು ನೆರವಾಗಿರುವುದು ಯೋಜನೆಯ ಸಾರ್ಥಕತೆಗೆ ಸಾಕ್ಷಿ. ಇಂತಹ ಅದೆಷ್ಟೋ ಜನರ ಬದುಕಲ್ಲಿ ಬದಲಾವಣೆಯನ್ನು ತಂದಿವೆ ನಮ್ಮ ಗ್ಯಾರಂಟಿ ಯೋಜನೆಗಳು. ಕಾಂಗ್ರೆಸ್ ಜನರ ಬದುಕನ್ನು ಕಟ್ಟಿಕೊಡುವ ಮೂಲಕ ದೇಶವನ್ನು ಕಟ್ಟಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಸಿದ್ದರಾಮಯ್ಯ ಅವರ ಟ್ವೀಟ್ ಅನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ ಇಂತಹ ಯಶಸ್ಸಿನ ಕಥೆಗಳು' ನನ್ನನ್ನು ನಂಬುವಂತೆ ಮಾಡುತ್ತವೆ ಮತ್ತು ಮಹಿಳೆಯರ ಖಾತೆಗೆ ಪ್ರತಿ ವರ್ಷ 1 ಲಕ್ಷ ರೂ. ಜಮೆ ಮಾಡುವ ನಮ್ಮ 'ಮಹಾಲಕ್ಷ್ಮಿ ಗ್ಯಾರಂಟಿಯು ದೇಶದ ಭವಿಷ್ಯವನ್ನು ರೂಪಿಸುವ ಕ್ರಾಂತಿಕಾರಿ ಹೆಜ್ಜೆ ಎಂದು ಸಾಬೀತು ಪಡಿಸುತ್ತದೆ ಎಂದಿದ್ದಾರೆ.
ನನ್ನ ತಂದೆ ಇಲ್ಲ. ಕುಟುಂಬ ಸಾಲದ ಸುಳಿಯಲ್ಲಿ ಸಿಲುಕಿದ್ದರಿಂದ ನನ್ನ ತಾಯಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂಕಷ್ಟದ ಸಮಯದಲ್ಲಿ, ಗೃಹಲಕ್ಷ್ಮಿ ಯೋಜನೆಯ ಮೂಲಕ ಪಡೆದ ಹಣ ನನ್ನ ಅಧ್ಯಯನ ಮತ್ತು ಹಾಸ್ಟೆಲ್ ವಾಸ್ತವ್ಯ ಮತ್ತು ಇತರ ಖರ್ಚುಗಳಿಗೆ ಸಹಾಯ ಮಾಡಿತು' ಎಂದು ವೇದಾಂತ್ ಹೇಳಿದ್ದಾರೆ.