ರಾಮನಗರ,ಏ 11(DaijiworldNews/AK):ಕಾಂಗ್ರೆಸ್ ಸೋಲುವ ಆತಂಕದಲ್ಲಿ ಏನೇನೋ ಆರೋಪ ಮಾಡುತ್ತಿದೆ.ಚುನಾವಣಾಧಿಕಾರಿಗಳು ಅವರ ಕೈಗೊಂಬೆಯಾಗಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ತೋಟದ ಮನೆಯ ಹೊಸತೊಡಕು ಊಟಕ್ಕೆ ಚುನಾವಣಾಧಿಕಾರಿಗಳು ನಿಲ್ಲಿಸಿದ ವಿಚಾರದ ಕುರಿತು ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಸಾಮಾನ್ಯವಾಗಿ ಯುಗಾದಿ ಹಬ್ಬದಲ್ಲಿ ಹೊಸತೊಡಕು ಊಟ ಹಾಕುತ್ತೇವೆ. ನಮ್ಮ ತೋಟದ ಮನೆಯ 100 ರಿಂದ 150 ಮಂದಿ ಕೆಲಸಗಾರರಿಗೆ ಊಟದ ವ್ಯವಸ್ಥೆ ಮಾಡಿದ್ದೆವು. ಅಲ್ಲದೇ ಬಿಜೆಪಿ-ಜೆಡಿಎಸ್ ಮುಖಂಡರು ಸಹ ಊಟಕ್ಕೆ ಸೇರುವ ತೀರ್ಮಾನ ಮಾಡಿದ್ದೆವು. ಇಲ್ಲಿ ಯಾವುದೇ ಪಾರ್ಟಿ ಕಾರ್ಯಕ್ರಮ ಮಾಡುತ್ತಿರಲಿಲ್ಲ. ಸಾರ್ವಜನಿಕ ಸಮಾರಂಭ ಮಾಡುತ್ತಿರಲಿಲ್ಲ. ಕಾಂಗ್ರೆಸ್ನವರ ರೀತಿಯ ಕುಕ್ಕರ್, ಸೀರೆ ಹಂಚುವ ಕಾರ್ಯಕ್ರಮ ನಮ್ಮದಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸೋಲುವ ಆತಂಕದಲ್ಲಿ ಏನೇನೋ ಆರೋಪ ಮಾಡುತ್ತಿದೆ. ಅವರ ದೂರಿಗೆ ಮಣೆಹಾಕಿ ಅಧಿಕಾರಿಗಳು ತೋಟದ ಮನೆಗೆ ಬಂದು ಪರಿಶೀಲನೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಕುಕ್ಕರ್, ಸೀರೆ ಹಂಚುವ ಬಗ್ಗೆ ಯಾಕೆ ಚುನಾವಣಾ ಆಯೋಗ ಕ್ರಮವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಚುನಾವಣಾಧಿಕಾರಿಗಳು ಅವರ ಕೈಗೊಂಬೆ ಆಗಿರೋದು ಸ್ಪಷ್ಟವಾಗಿದೆ. ರಾಮನಗರದಲ್ಲಿ ಸುಮಾರು 3,700 ಸೀರೆ ಜಪ್ತಿ ಮಾಡಿದ್ದು ನಮ್ಮ ಕಾರ್ಯಕರ್ತರು. ಆಗ ಚುನಾವಣಾ ಆಯೋಗ, ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಚುನಾವಣಾಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.