ದೆಹಲಿ, ಏ 11 (DaijiworldNews/AA): ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿರುವ ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಅವರ ಪುತ್ರಿ, ಬಿಆರ್ ಎಸ್ ನಾಯಕಿ ಕೆ.ಕವಿತಾ ಅವರನ್ನು ಸಿಬಿಐ ಗುರುವಾರ ಬಂಧಿಸಿದೆ.
ನ್ಯಾಯಾಂಗ ಬಂಧನದಲ್ಲಿರುವ ಬಿಆರ್ ಎಸ್ ನಾಯಕಿ ಕೆ.ಕವಿತಾ ಅವರ ಕಸ್ಟಡಿಯನ್ನು ನ್ಯಾಯಾಲಯ ಏಪ್ರಿಲ್ 23 ರವರೆಗೆ ವಿಸ್ತರಿಸಿತ್ತು. ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆ ಕವಿತಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಏ. 8ರಂದು ಕವಿತಾ ಅವರಿಗೆ ಮಧ್ಯಂತರ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತ್ತು. ಹಾಗೂ ಪ್ರಾಥಮಿಕ ದೃಷ್ಟಿಯಲ್ಲಿ ಕವಿತಾ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದು ತೋರುತ್ತದೆ ಎಂದು ವಕೀಲರು ವಾದ ಮಂಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಸಿಬಿಐ 6 ಗಂಟೆಗಳ ಕಾಲ ಕವಿತಾರನ್ನು ವಿಚಾರಣೆಗೆ ಒಳಪಡಿಸಿತ್ತು. ಇದೀಗ ತಿಹಾರ್ ಜೈಲಿನಲ್ಲಿರುವ ಕವಿತಾರನ್ನು ಸಿಬಿಐ ಬಂಧಿಸಿದೆ.