ಚಿಕ್ಕೋಡಿ, ಏ 11 (DaijiworldNews/AA): ರಾಜ್ಯದಲ್ಲಿ ಬಿಜೆಪಿ ಅಧೋಗತಿ ತಲುಪಿದ್ದು, ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದಲ್ಲಿ ಬೆಲೆ ಇಲ್ಲ ಎಂದು ಕಾಂಗ್ರೆಸ್ ಶಾಸಕರಾಗಿರುವ ಲಕ್ಷ್ಮಣ ಸವದಿ ತಿಳಿಸಿದರು.
ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಶಕಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಾ ಬಂದವರನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗುತ್ತಿದೆ. ಪ್ರಸ್ತುತ ನಮ್ಮ ರಾಜ್ಯದ ಬಿಜೆಪಿ ನಾಯಕರಲ್ಲಿತತ್ವ ಸಿದ್ಧಾಂತಗಳೇನೂ ಉಳಿದಿಲ್ಲ. ವ್ಯಾಪಾರೀಕರಣ ಅದರಲ್ಲಿ ಹಾಸುಹೊಕ್ಕಿದೆ ಎಂದು ಹೇಳಿದರು.
ಇನ್ನು ವಿಧಾಸಭಾ ಚುನಾವಣಾ ಸಮಯದಲ್ಲಿ ಹಣಕ್ಕಾಗಿ ಟಿಕೆಟ್ ಗಳನ್ನು ಮಾರಿಕೊಂಡ ವದಂತಿಗಳು ಹೆಚ್ಚಾಗಿ ಹರಡಿತ್ತು. ಇದೀಗ ಲೋಕಸಭಾ ಚುನಾವಣೆಯಲ್ಲೂ ಉಮೇದುವಾರರು ಹಣ ಚೆಲ್ಲಿ ಟಿಕೆಟ್ ಪಡೆದಿರುವರೆಂದು ಆರೋಪಗಳು ಕೇಳಿಬರುತ್ತಿವೆ. ಎರಡು ದಶಕಗಳ ಕಾಲ ನಾನು ಬಿಜೆಪಿಯಲ್ಲಿದ್ದೆ. ಇದೀಗ ಬಿಜೆಪಿಯಿಂದ ಯಾಕೆ ಹೊರಗೆ ಬಂದೆ ಅನ್ನೋದು ಜನಕ್ಕೆ ಅರ್ಥವಾಗಿರಬಹುದು. ಇದೀಗ ರಾಜ್ಯ ಬಿಜೆಪಿ ಶುದ್ಧೀಕರಣ ಮಾಡುವ ಜವಾಬ್ದಾರಿಯನ್ನು ಕೆಎಸ್ ಈಶ್ವರಪ್ಪ ತೆಗೆದುಕೊಂಡಂತೆ ಇದೆ ಎಂದರು.