ದೆಹಲಿ, ಏ 11 (DaijiworldNews/AA): ಪಾಕಿಸ್ತಾನವು ತನ್ನ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆಯನ್ನು ನಿಯಂತ್ರಿಸಬೇಕು. ಅಗತ್ಯವಿದ್ದರೆ ಭಾರತವು ಕೂಡ ಪಾಕಿಸ್ತಾನಕ್ಕೆ ಭಯೋತ್ಪಾದನೆ ಚಟುವಟಿಕೆಯನ್ನು ನಿಯಂತ್ರಿಸಲು ಬೆಂಬಲ ನೀಡುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಪಾಕ್ ಭಯೋತ್ಪಾದನೆಯನ್ನು ನಿಗ್ರಹಿಸಲು ಅಸಮರ್ಥ ಎಂದು ಭಾವಿಸಿದರೆ, ಭಯೋತ್ಪಾದನೆಯನ್ನು ತಡೆಯಲು ಸಹಕರಿಸಲು ಭಾರತ ಸಿದ್ಧವಾಗಿದೆ. ಒಂದು ವೇಳೆ ಪಾಕಿಸ್ತಾನವು ಭಯೋತ್ಪಾದನೆಯನ್ನು ಒಂದು ಸಾಧನವನ್ನಾಗಿ ಬಳಸಿಕೊಂಡು ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದರೆ, ಅದರ ಪರಿಣಾಮವನ್ನು ಕೂಡ ಎದುರಿಸಲು ಪಾಕ್ ಸಿದ್ಧವಿರಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪಾಕ್ ಆಕ್ರಮಿತ-ಕಾಶ್ಮೀರವು ಭಾರತದ ಒಂದು ಭಾಗವಾಗಿತ್ತು. ಮುಂದೆ ಕೂಡ ಭಾರತದ ಭಾಗವಾಗಿಯೇ ಇರುತ್ತದೆ ಎಂದರು. ಇನ್ನು ಇಂದಿರಾಗಾಂಧಿ ಕಾಲದಲ್ಲಿ ಏರಿದ ತುರ್ತುಪರಿಸ್ಥಿತಿಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ತನ್ನ ತಾಯಿಯ ನಿಧನದ ವೇಳೆಯಲ್ಲಿ, ಅವರ ಕೊನೆಯ ಕಾರ್ಯದಲ್ಲಿ ಭಾಗಿಯಾಗಲು ನನಗೆ ಸಾಧ್ಯವಾಗಿರಲಿಲ್ಲ. ಅದಕ್ಕೆ ಸರ್ಕಾರ ಅವಕಾಶ ನೀಡಿರಲಿಲ್ಲ. ಆಗ ಕಾಂಗ್ರೆಸ್ ಸರ್ವಾಧಿಕಾರಿಯಂತೆ ವರ್ತಿಸುತ್ತಿತ್ತು ಎಂದು ಹೇಳಿದರು.