ಬೆಂಗಳೂರು, ಏ 10(DaijiworldNews/AA): ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲೆ ಒದಗಿಸುವಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ.
2013ರ ಏ. 1ರಿಂದ 2018ರ ಏ. 30ರ ಅವಧಿಯಲ್ಲಿನ ಅಕ್ರಮವಾಗಿ 74.93 ಕೋಟಿ ರೂ. ಮೌಲ್ಯದ ಆಸ್ತಿಗಳಿಕೆಯ ಆರೋಪದಡಿ ಡಿಕೆಶಿ ಅವರ ವಿರುದ್ಧ ಲೋಕಾಯುಕ್ತ ದೂರು ದಾಖಲಿಸಿಕೊಂಡಿತ್ತು. ಸದ್ಯ ಮುಂಬರುವ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿ ಆಗಿರುವ ಡಿಕೆಶಿ ಅವರಿಗೆ ನೋಟಿಸ್ ನೀಡುವ ಮೂಲಕ ಲೋಕಾಯುಕ್ತ ಶಾಕ್ ನೀಡಿದೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ತನಿಖೆ ರದ್ದು ಮಾಡಿದ ರಾಜ್ಯ ಸರ್ಕಾರ, ಲೋಕಾಯುಕ್ತ ತನಿಖೆಗೆ ಪ್ರಕರಣವನ್ನು ನೀಡಿತ್ತು. ಈ ಹಿನ್ನೆಲೆ ಲೋಕಾಯುಕ್ತ ಪೊಲೀಸ್, ಕಳೆದ ಫೆಬ್ರವರಿಯಲ್ಲಿ ಡಿಕೆಶಿ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ತಿ ಗಳಿಕೆ ವಿವರ ನೀಡುವಂತೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ. ಇನ್ನು ಈ ನೋಟೀಸ್ ನಲ್ಲಿ ಸಿಬಿಐಗೆ ನೀಡಿರುವ ದಾಖಲಾತಿಗಳ ಮಾಹಿತಿಗಳನ್ನು ಒದಗಿಸುವಂತೆ ಲೋಕಾಯುಕ್ತ ಸೂಚನೆ ನೀಡಿದೆ.