ಲಕ್ನೋ, ಏ 10(DaijiworldNews/AA): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಏರಿದರೆ ಮೊಬೈಲ್ ಡೇಟಾಗೆ ಉಚಿತವಾಗಿ 500 ರೂ. ಹಣವನ್ನು ಎಲ್ಲಾ ಬಿಪಿಎಲ್ ಪಡಿತರ ಕಾರ್ಡ್ ಹೊಂದಿದ ಗ್ರಾಹಕರಿಗೆ ನೀಡಲಾಗುತ್ತದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಇಂದು ಘೋಷಣೆ ಮಾಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಅಖಿಲೇಶ್ ಯಾದವ್ ಅವರು, ಉಚಿತ ಲ್ಯಾಪ್ಟಾಪ್ ನೀಡಿದ ನಂತರ ಸಮಾಜದಲ್ಲಿ ದೊಡ್ಡ ಬದಲಾವಣೆಯಾಗಿದೆ. ಹೀಗಾಗಿ ಮೊಬೈಲ್ ಡೇಟಾಗೆ 500 ರೂ. ನೀಡಲಾಗುವುದು ಎಂದು ಹೇಳಿದರು.
ಇನ್ನು ಅಖಿಲೇಶ್ ಯಾದವ್ ಅವರು ಬಿಡುಗಣೆ ಮಾಡಿದ ಪ್ರಣಾಳಿಕೆಯು 2025ರ ಒಳಗಡೆ ಜಾತಿ ಆಧಾರಿತ ಸಮೀಕ್ಷೆ, ‘ಅಗ್ನಿಪಥ್’ ಯೋಜನೆ ರದ್ದು- ಸಶಸ್ತ್ರ ಪಡೆಗಳಲ್ಲಿ ನಿಯಮಿತ ನೇಮಕಾತಿಯನ್ನು ಪರಿಚಯ, ಸರ್ಕಾರಿ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿ, ಸ್ವಾಮಿನಾಥನ್ ವರದಿಯಂತೆ ಕೃಷಿ ಬೆಳೆಗಳಿಗೆ ಎಂಎಸ್ಪಿ ಗೆ ಕಾನೂನು ಖಾತರಿ, ಅರೆಸೇನಾ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಹಳೆಯ ಪಿಂಚಣಿ ಯೋಜನೆ ಪ್ರಾರಂಭ ಹಾಗೂ ಎಲ್ಲಾ ಭೂರಹಿತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾಸಿಕ 5,000 ರೂಪಾಯಿ ಪಿಂಚಣಿ ಇವುಗಳನ್ನು ಒಳಗೊಂಡಿದೆ.