ರಾಮನಗರ, ಏ 10(DaijiworldNews/AA): ಮಾಜಿ ಸಿಎಂ ಹಾಗೂ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿಯವರ ತೋಟದ ಮನೆ ಮೇಲೆ ಚುನಾವಣಾಧಿಕಾರಿಗಳು ಇಂದು ದಿಢೀರ್ ದಾಳಿ ನಡೆಸಿದ್ದಾರೆ.
ಯುಗಾದಿ ಹಬ್ಬದ ಹೊಸತೊಡಕು ಪ್ರಯುಕ್ತ ಕುಮಾರಸ್ವಾಮಿಯವರು ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಪಕ್ಷದ ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಪಕ್ಷವು "ಕುಮಾರಸ್ವಮಿಯವರು ಸೋಲಿನ ಭೀತಿಯಿಂದ ಮತದಾರರಿಗೆ ಬಾಡೂಟದ ವ್ಯವಸ್ಥೆ ಮಾಡಿದ್ದಾರೆ. ಮಾಂಸ ಮತ್ತು ಮದ್ಯದ ಅಮಲು ಚುನಾವಣಾ ಆಯೋಗದ ಮೂಗಿಗೆ ಅಡರುತ್ತಿಲ್ಲವೇ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿತ್ತು.
ಕಾಂಗ್ರೆಸ್ ಈ ರೀತಿಯಾಗಿ ಟ್ವೀಟ್ ಮಾಡಿದ ಬೆನ್ನಲ್ಲೇ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ತೋಟದ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇನ್ನು ದಾಲಿ ನಡೆಸಿದ ಚುನಾವಣಾಧಿಕಾರಿಗಳು ಊಟಕ್ಕೆ ತಯಾರಾಗಿದ್ದ ಮಟನ್ ಬಿರಿಯಾನಿ, ಚಿಕನ್ ಕಬಾಬ್ ಮತ್ತು ಇತರ ಮಾಂಸಾಹಾರಿ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ.