ಮಹಾರಾಷ್ಟ್ರ, ಏ 10 (DaijiworldNews/MS): ಪಾಳು ಬಿದ್ದಿದ್ದ ಬಾವಿಗೆ ಬಿದ್ದಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಐವರು ಪ್ರಾಣ ಕಳೆದುಕೊಂಡ ದಾರುಣ ಘಟನೆ ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯಲ್ಲಿ ನಡೆದಿದೆ.
ಮಂಗಳವಾರ ಸಂಜೆ ನೆವಾಸಾ ತಹಸಿಲ್ನ ವಕ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪಾಳು ಬಿದ್ದಿದ್ದ ಬಾವಿಯಲ್ಲಿ ತ್ಯಾಜ್ಯಗಳನ್ನು ಎಸೆಯಲಾಗುತ್ತಿತ್ತು. ಇದರಲ್ಲಿ ಬಿದ್ದಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಸಾವಿಗೀಡಾಗಿದ್ದ ಐವರು ವ್ಯಕ್ತಿಗಳ ಶವಗಳನ್ನು ಮಧ್ಯರಾತ್ರಿಯ ನಂತರ ಅಧಿಕಾರಿಗಳು ಹೊರತೆಗೆದಿದ್ದಾರೆ ಎಂದು ತಿಳಿಸಿದ್ದಾರೆ.
ಬೆಕ್ಕನ್ನು ರಕ್ಷಿಸುವ ಪ್ರಯತ್ನದಲ್ಲಿ ಐವರು ಒಬ್ಬರ ನಂತರ ಒಬ್ಬರು ಬಾವಿಗೆ ಇಳಿದಿದ್ದಾರೆ ಆದರೆ ಅಲ್ಲಿರುವ ವಿಷ ಅನಿಲ ಸೇವಿಸಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದಿದ್ದ ಓರ್ವನನ್ನು ಪೊಲೀಸರ ತಂಡ ರಕ್ಷಿಸಿದೆ. ಬಳಿಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ನೆವಾಸಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಧನಂಜಯ್ ಜಾಧವ್ ತಿಳಿಸಿದ್ದಾರೆ.
ನಾವು ಸಂತ್ರಸ್ತರ ದೇಹಗಳನ್ನು ಜೈವಿಕ ಅನಿಲ ಗುಂಡಿಯಿಂದ ಹೊರತೆಗೆದಿದ್ದೇವೆ. ಬುಧವಾರ ಮಧ್ಯರಾತ್ರಿ 12.30ರ ಹೊತ್ತಿಗೆ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ' ಎಂದು ಜಾಧವ್ ತಿಳಿಸಿದ್ದಾರೆ.