ಬೆಂಗಳೂರು,ಏ 10 (DaijiworldNews/AK): ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಎನ್.ಡಿ.ಎ ಅಭ್ಯರ್ಥಿಗಳು ಇಂದು ವಿಜಯನಗರದ ಆದಿಚುಂಚನಗರಿ ಮಠಕ್ಕೆ ಭೇಟಿ ನೀಡಿ ಡಾ. ನಿರ್ಮಲಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಒಗ್ಗಟ್ಟಿನ ಸಂದೇಶವನ್ನು ಕೊಟ್ಟಿದ್ದೇವೆ. ಈ ಒಗ್ಗಟ್ಟಿನ ಸಂದೇಶ ನೋಡಿ ಕಾಂಗ್ರೆಸ್ಸಿನವರಿಗೆ ಆತಂಕ ಮತ್ತು ನಡುಕ ಉಂಟಾಗಿದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ತಿಳಿಸಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರಿಗೆ ಪ್ರತಿಪಕ್ಷದ ಸ್ಥಾನವನ್ನೂ ಪಡೆಯಲಾಗುತ್ತಿಲ್ಲ. ಆದ್ದರಿಂದ ಅವರಿಗೆ ಮತ ಹಾಕುವುದರಿಂದ ಯಾವುದೇ ಪ್ರಯೋಜನ ಇಲ್ಲ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರವನ್ನು ಈ ಹಿಂದೆ ಬೀಳಿಸಿದ್ದು ಯಾರೆಂದು ಕುಮಾರಣ್ಣನವರು ಈಗಾಗಲೇ ಹೇಳಿದ್ದಾರೆ. ಕಾಂಗ್ರೆಸ್ಸಿನ ವರಿಷ್ಠರು ಜೊತೆಗಿದ್ದೇ ಕುತ್ತಿಗೆ ಕೊಯ್ದರು ಎಂದು ಅವರು ಹೇಳಿದ್ದಾರೆ ಎಂದು ವಿವರಿಸಿದರು
ಪಾಪ, ಅವರಿಗೆ ಬೇಸಿಗೆ ಬಿಸಿ, ರಾಜಕೀಯ ಬಿಸಿ ತಡಕೊಳ್ಳಲು ಆಗುತ್ತಿಲ್ಲ ಎಂದು ಟೀಕಿಸಿದರು. ಸೋಲಿನ ಆತಂಕ ಕಾಂಗ್ರೆಸ್ಸಿನವರನ್ನು ಕಾಡುತ್ತಿದ್ದು, ಏನೇನೋ ಹೇಳಿಕೆ ಕೊಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಬಿಜೆಪಿ- ಜೆಡಿಎಸ್ ಮೈತ್ರಿ ಮೂಲಕ ನಮ್ಮ 28 ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿ.ಕೆ.ಸುರೇಶ್ ಅವರು ಆ ಭಾಗದಲ್ಲಿ ಏನೇನೂ ಕೆಲಸ ಮಾಡಿಲ್ಲ. ಅಲ್ಲಿ ಭಯದ ವಾತಾವರಣ ಇತ್ತು. ಅಲ್ಲಿ ಪ್ರೀತಿಯ ವಾತಾವರಣ ಬೇಕಿದೆ. ಅದಕ್ಕೆ ಅರ್ಹ ವ್ಯಕ್ತಿ ಬೇಕು. ಬೆಂಗಳೂರು ಪ್ರಗತಿದಾಯಕ, ಭರವಸೆದಾಯಕ ನಗರ. ಡಾ. ಮಂಜುನಾಥ್ ಅವರ ಗೆಲುವು ಅತ್ಯಂತ ಸ್ಪಷ್ಟ ಎಂದು ತಿಳಿಸಿದರು. ಸುರೇಶ್ ಜನಕ್ಕೆ ಬೇಡವಾಗಿದ್ದಾರೆ. ಮೋದಿಯವರು ಬೇಕು ಎಂಬ ಮನಸ್ಥಿತಿ ಜನರದು ಎಂದು ವಿವರಿಸಿದರು.