ಬೆಂಗಳೂರು, ಏ 08 (DaijiworldNews/AK):ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ಬರಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ಕೂಡಾ ತಪ್ಪು ಮಾಹಿತಿ ನೀಡಿ ನ್ಯಾಯಾಲಯದ ಹಾದಿ ತಪ್ಪಿಸುವ ಪ್ರಯತ್ನ ಮಾಡಿರುವುದು ವಿಷಾದನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನ್ಯಾಯಬದ್ಧವಾಗಿ ಕರ್ನಾಟಕಕ್ಕೆ ನೀಡಬೇಕಾಗಿರುವ ಬರಪರಿಹಾರವನ್ನು ನೀಡದೆ ಕೇಂದ್ರ ಸರ್ಕಾರ ಕಳೆದ ಐದಾರು ತಿಂಗಳುಗಳಿಂದ ಸತಾಯಿಸುತ್ತಿರುವುದನ್ನು ಕಂಡು ಬೇರೆ ದಾರಿ ಕಾಣದೆ ನ್ಯಾಯ ಕೋರಿ ನಮ್ಮ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿತ್ತು. ಇಂದು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಅಡ್ವೋಕೇಟ್ ಜನರಲ್ ತುಷಾರ್ ಮೆಹ್ತಾ ಅವರು ಬರಪರಿಹಾರ ವಿಳಂಬಕ್ಕೆ ಕರ್ನಾಟಕ ಸರ್ಕಾರವೇ ಕಾರಣ. ಇದರ ಹಿಂದೆ ರಾಜಕೀಯ ಉದ್ದೇಶ ಇದೆ ಎಂಬ ಅಭಿಪ್ರಾಯ ಮೂಡುವಂತೆ ವಾದ ಮಾಡಿದ್ದಾರೆ. ಇದು ಖಂಡನೀಯ ಎಂದರು.
ಬರ ಪರಿಹಾರಕ್ಕಾಗಿ ಅವರು (ಕರ್ನಾಟಕ) ನಮ್ಮನ್ನು (ಕೇಂದ್ರ ಸರ್ಕಾರ)ವನ್ನು ಸಂಪರ್ಕಿಸಬಹುದಿತ್ತು. ಈ ಅರ್ಜಿ ಸಲ್ಲಿಸಿರುವ ಸಮಯದ ಮಹತ್ವ ನಮಗೆ ಅರ್ಥವಾಗುತ್ತದೆ. ಈ ಅರ್ಜಿಗೆ ಪ್ರತಿಕ್ರಿಯೆ ಕೋರಿ ನಮಗೆ ನೋಟೀಸ್ ನೀಡಬಾರದು. ಹಾಗೆ ಮಾಡಿದರೆ ಅದು ಸುದ್ದಿಯಾಗುತ್ತದೆ ಎಂದು ಅಡ್ವೋಕೇಟ್ ಜನರಲ್ ಕೇಂದ್ರ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಕರ್ನಾಟಕ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ.
ಎಂದರು.
ಕಳೆದ ಎರಡು ಮೂರು ತಿಂಗಳ ಅವಧಿಯಲ್ಲಿ ನಾನು ಮತ್ತೆ ಮತ್ತೆ ಹೇಳಿರುವಂತೆ ಬರಗಾಲಕ್ಕೆ ಪರಿಹಾರ ಕೋರಿ ನಮ್ಮ ಸರ್ಕಾರ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿಯೇ ನಷ್ಟದ ವಿವರ ಮತ್ತು ನಿರೀಕ್ಷಿತ ಪರಿಹಾರದ ಮೊತ್ತವನ್ನು ಒಳಗೊಂಡ ಮನವಿ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೆವು. ಅದರ ನಂತರ ನಾನು ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಮಾಡಿದ್ದೆವು. ನಮ್ಮ ಉಪಮುಖ್ಯಮಂತ್ರಿಗಳು ಪ್ರತ್ಯೇಕವಾಗಿ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿದ್ದರು. ಹೀಗಿದ್ದರೂ ಕರ್ನಾಟಕ ಸರ್ಕಾರ ವಿಳಂಬವಾಗಿ ಮನವಿ ಸಲ್ಲಿಸಿದೆ ಎಂದು ಕೇಂದ್ರ ಹಣಕಾಸು ಸಚಿವರು ಮತ್ತು ಗೃಹಸಚಿವರು ಯಾವ ಮುಜುಗರ ಇಲ್ಲದೆ ಸುಳ್ಳು ಹೇಳುತ್ತಾ ಬಂದಿದ್ದಾರೆ. ಇಂದು ಇದೇ ಸುಳ್ಳನ್ನು ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮುಂದೆಯೂ ಹೇಳಿದೆ ಎಂದರು.
ಕೇಂದ್ರ ಸರ್ಕಾರದ ಅಡ್ವೋಕೇಟ್ ಜನರಲ್ ಅವರ ಹೇಳಿಕೆಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಸದ್ಯಕ್ಕೆ ಪ್ರಕರಣವನ್ನು ಎರಡು ವಾರಗಳ ಕಾಲ ಮುಂದೂಡಿದೆ. ಮುಂದಿನ ವಿಚಾರಣೆಯೊಳಗೆ ಕೇಂದ್ರ ಸರ್ಕಾರ ತನ್ನ ಉತ್ತರವನ್ನು ಸಿದ್ಧಗೊಳಿಸಬೇಕಾಗಿದೆ.
ಬರಪರಿಹಾರ ನೀಡಿಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿರುವ ಅನ್ಯಾಯದ ವಿರುದ್ಧದ ನಮ್ಮ ಹೋರಾಟ ಬೀದಿಗಳಲ್ಲಿ ಮಾತ್ರವಲ್ಲ ನ್ಯಾಯಾಲಯದಲ್ಲಿಯೂ ಮುಂದುವರಿಯಲಿದೆ. ಕೇಂದ್ರ ಸರ್ಕಾರದ ಸುಳ್ಳುಗಳನ್ನು ಒಂದೊಂದಾಗಿ ಬಯಲುಗೊಳಿಸುತ್ತಾ ಅದರ ನಿಜಸ್ವರೂಪವನ್ನು ರಾಜ್ಯದ ಜನತೆಯ ಮುಂದಿಡುವ ಪ್ರಯತ್ನವನ್ನು ಮಾಡಲಿದ್ದೇವೆ ಎಂದು ಪ್ರತಿಕಾ ಪ್ರಕಟನೆಯಲ್ಲಿ ಸಿಎಂ ತಿಳಿಸಿದ್ದಾರೆ.