ಮೈಸೂರು, ಏ 08 (DaijiworldNews/AA): ರಾಜ್ಯಕ್ಕೆ ಅತೀ ಹೆಚ್ಚು ಅನುದಾನ, ತೆರಿಗೆ ಪಾಲು ಕೊಟ್ಟಿರುವುದು ಮೋದಿ ಸರ್ಕಾರ. ಚರ್ಚೆ ಬೇಕಾದರೆ ಕಾಂಗ್ರೆಸ್ ಪಕ್ಷ ನಡೆಸಲಿ. ನಾವು ಕಾಂಗ್ರೆಸ್ ನ ದೃಷ್ಟಿದೋಷವನ್ನು ನಿವಾರಣೆ ಮಾಡುತ್ತೇವೆ ಎಂದು ಮಾಜಿ ಸಚಿವ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯ ನಂತರ ದೇಶದ ಜನರೇ ರಾಹುಲ್ ಗಾಂಧಿಗೆ ಕಡ್ಡಾಯ ರಜೆ ನೀಡುತ್ತಾರೆ. ತಾಲಿಬಾನ್ ಗಳ ಪ್ರೇರಣೆ ಹಾಗೂ ನಗರ ನಕ್ಸಲಿಯರ ಸಹಾಯದಿಂದ ಕಾಂಗ್ರೆಸ್ ತನ್ನ ಪ್ರಣಾಳಿಕೆ ಸಿದ್ಧಪಡಿಸಿದೆ. ಕಾಂಗ್ರೆಸ್ ಗೆ ದೇಶ ವಿಭಜನೆ ರೋಗ ಆವರಿಸಿದೆ. ದೇಶ ವಿಭಜಿಸುವ ರೋಗ ಕಾಂಗ್ರೆಸ್ ಗೆ ಈ ಹಿಂದಿನಿಂದಲೂ ಇದೆ. ಈಗಲೂ ಇದೆ ಎಂದು ಕಿಡಿಕಾರಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಡಬಲ್ ಡಿಜಿಟ್ ಕೂಡ ದಾಟುವುದಿಲ್ಲ. ಆದ್ದರಿಂದ ಇವರ ವಿಭಜನೆಯ ಯೋಚನೆ ಪ್ರಣಾಳಿಕೆಯಲ್ಲಿಯೇ ಸತ್ತು ಹೋಗುತ್ತದೆ ಎಂದು ಅವರು ಲೇವಡಿ ಮಾಡಿದರು.