ರಾಜಸ್ಥಾನ, ಏ 07 (DaijiworldNews/AA): ಮಿಸ್ ಇಂಡಿಯಾ ಫೈನಲಿಸ್ಟ್ ಆಗಿ ಜನಪ್ರಿಯತೆ ಪಡೆದಿದ್ದ ಮಾಡೆಲ್ ಐಶ್ವರ್ಯಾ ಶೆರಾನ್ ಅವರು ತಮ್ಮ ಗ್ಲಾಮರಸ್ ಲೋಕವನ್ನು ತ್ಯಜಿಸಿ ಯುಪಿಎಸ್ ಸಿ ಪರೀಕ್ಷೆ ಬರೆದು ಐಎಫ್ ಎಸ್ ಅಧಿಕಾರಿಯಾದ ಸ್ಫೂರ್ತಿದಾಯಕ ಕತೆ ಇದು.
ಐಶ್ವರ್ಯಾ ಶೆರಾನ್ ಅವರು ಮೂಲತಃ ರಾಜಸ್ಥಾನದವರು. ಐಶ್ವರ್ಯಾ ಅವರ ತಂದೆ ಅಜಯ್ ಕುಮಾರ್ ಅವರು ಕರೀಂನಗರದಲ್ಲಿರುವ 9ನೇ ತೆಲಂಗಾಣ ಎಸ್ ಸಿಸಿ ಬೆಟಾಲಿಯನ್ ನ ಕಮಾಂಡಿಂಗ್ ಆಫೀಸರ್ ಆಗಿದ್ದಾರೆ. ಐಶ್ವರ್ಯಾ ಅವರ ತಂದೆ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರಣ ಆಕೆ ಸಹಜವಾಗಿಯೇ ದೇಶ ಸೇವೆ ಮಾಡುವ ಉದ್ದೇಶವನ್ನು ಹೊಂದಿದ್ದರು.
ರಾಜಸ್ಥಾನದಲ್ಲಿ ಜನಿಸಿದ ಐಶ್ವರ್ಯಾ ಅವರು ಬಳಿಕ ದೆಹಲಿಗೆ ತೆರಳುತ್ತಾರೆ. ದೆಹಲಿಯಲ್ಲಿ ಚಾಣಕ್ಯಪುರದಲ್ಲಿನ ಸಂಸ್ಕೃತಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆಯುತ್ತಾರೆ. 12ನೇ ತರಗತಿಯಲ್ಲಿ 97.5 ಶೇಕಡ ಅಂಕವನ್ನು ಗಳಿಸುತ್ತಾರೆ. ಬಳಿಕ ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಪದವಿ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ. ಪದವಿ ಶಿಕ್ಷಣದ ಜೊತೆ ಜೊತೆಗೆ ಐಶ್ವರ್ಯಾ ಅವರು ಮಾಡೆಲಿಂಗ್ ಕೂಡ ಮಾಡುತ್ತಿದ್ದರು. ಹಾಗೂ ಅನೇಕ ಸೌಂದರ್ಯ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದರು.
ಐಶ್ವರ್ಯಾ ಅವರು 2014 ರಲ್ಲಿ ಮಿಸ್ ಕ್ಲೀನ್ ಹಾಗೂ ಕೇರ್ ಫ್ರೆಶ್ ಫೇಸ್ ಪ್ರಶಸ್ತಿಯನ್ನು ಗಳಿಸುತ್ತಾರೆ. 2015 ರಲ್ಲಿ ಮಿಸ್ ದೆಹಲಿ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು. 2016ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆದ ಐಶ್ವರ್ಯಾ ಅವರು, 2018 ರಲ್ಲಿ ಐಐಎಂ ಇಂದೋರ್ ಗೆ ಆಯ್ಕೆಯಾಗುತ್ತಾರೆ. ಆ ಬಳಿಕ ತಮ್ಮ ವೃತ್ತಿಜೀವನವನ್ನು ಬದಲಾಯಿಸಲು ನಿರ್ಧರಿಸಿದ ಐಶ್ವರ್ಯಾ ಯುಪಿಎಸ್ ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ.
ಬಳಿಕ ಯಾವುದೇ ತರಬೇತಿಯನ್ನು ಪಡೆಯದೇ ಐಶ್ವರ್ಯಾ ಅವರು ಯುಪಿಎಸ್ ಸಿ ಪರಿಕ್ಷೆ ಬರೆಯುತ್ತಾರೆ. ಈ ಪರೀಕ್ಷೆಯಲ್ಲಿ 93 ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಐಶ್ವರ್ಯಾ ಅವರು ಪ್ರಸ್ತುತ ಭಾರತದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.