ಬೆಂಗಳೂರು, ಏ 06 (DaijiworldNews/AA): ರಾಜ್ಯ ಸರ್ಕಾರಕ್ಕೆ ಬರ, ಪ್ರಕೃತಿ ವಿಕೋಪಗಳನ್ನು ಎದುರಿಸಲು ಮುಂಚಿತವಾಗಿಯೇ ಎಸ್ಡಿಆರ್ಎಫ್ ಅಡಿ 697 ಕೋಟಿ ರೂ. ಹಣ ನೀಡಲಾಗಿದೆ. ನಾವು ನೀಡಿದ ಹಣದಲ್ಲೇ ಬರಕ್ಕೂ ವಿನಿಯೋಗ ಮಾಡಿಕೊಳ್ಳಬಹುದಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಬೆಂಗಳೂರಿನನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್ಡಿಆರ್ಎಫ್ ಅಡಿ 929.60 ಕೋಡಿ ರೂ. ಅನುದಾನ ಇದ್ದು, ಅದರಲ್ಲಿ 697 ಕೋಟಿ ರೂ. ಹಣವನ್ನು ಕೇಂದ್ರ ಎರಡು ಕಂತಿನಲ್ಲಿ ರಾಜ್ಯ ಸರ್ಕಾರಕ್ಕೆ ನೀಡಿದೆ. ಕೇಂದ್ರ ಈ ಹಣವನ್ನು ಮುಂಚಿತವಾಗಿಯೇ ಬಿಡುಗಡೆ ಮಾಡಿದೆ. ಅದರಲ್ಲೇ ಬರ ಪರಿಹಾರಕ್ಕೂ ಹಣ ವಿನಿಯೋಗ ಮಾಡುವ ಅವಕಾಶವಿದೆ. ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ವಿಳಂಬವಾಗಿಲ್ಲ ಎಂದು ತಿಳಿಸಿದ್ದಾರೆ.
ಸದ್ಯದಲ್ಲೇ ಕೇಂದ್ರ ಉನ್ನತ ಮಟ್ಟದ ಸಭೆ ನಡೆಸಲಿದೆ. ಈ ಸಭೆಯಲ್ಲಿ ಬರ ಪರಿಹಾರ ಬಿಡುಗಡೆ ಮಾಡಲಿದೆ. ಹಾಗೂ ತೀರ್ಮಾನವಾಗುವ ಬರ ಪರಿಹಾರ ಬಿಡುಗಡೆಗೆ ಕೇಂದ್ರ ಚುನಾವಣಾ ಆಯೋಗದ ಅನುಮತಿಯನ್ನೂ ಕೇಳಲಾಗಿದೆ ಎಂದು ಹೇಳಿದರು.