ಬೆಂಗಳೂರು, ಏ 06 (DaijiworldNews/AA): ಮಾಜಿ ಸಚಿವ ಕೆಎಸ್ ಈಶ್ವರಪ್ಪಗೆ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಬಳಕೆ ಮಾಡುವ ಅಧಿಕಾರವಿಲ್ಲ. ಒಂದು ವೇಳೆ ಅವರು ಬಳಕೆ ಮಾಡಿದರೆ ಅದು ತಪ್ಪು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಕೆಎಸ್ ಈಶ್ವರಪ್ಪ ಹಾಗೂ ಬಿವೈ ರಾಘವೇಂದ್ರ ನಡುವೆ ನಡೆದ ಮೋದಿ ಫೋಟೋ ಜಟಾಪಟಿ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರಿ ಕಾರ್ಯಕ್ರಮ ಆಗಿದ್ದರೆ ಪ್ರಧಾನಿ ಆಗಿರುವುದರಿಂದ ಮೋದಿ ಫೋಟೊ ಬಳಕೆ ಮಾಡಿಕೊಳ್ಳಬಹುದಿತ್ತು. ಬಿಜೆಪಿ ಪಕ್ಷಕ್ಕೆ ಮಾತ್ರ ರಾಜಕೀಯದ ಸಂದರ್ಭದಲ್ಲಿ ಮೂದಿ ಅವರ ಫೋಟೋ ಬಳಸುವ ಅಧಿಕಾರವಿದೆ. ಆದರೆ ಈಶ್ವರಪ್ಪ ಅವರು ಅನಧಿಕೃತವಾಗಿ ಮೋದಿ ಅವರ ಫೋಟೋವನ್ನು ಬಳಸಿಕೊಳ್ಳುತ್ತಿದ್ದಾರೆ. ಈಶ್ವರಪ್ಪ ಅವರು ನಾಮಪತ್ರ ಸಲ್ಲಿಸಿದ ನಂತರ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಈ ಬಾರಿ ಈಶ್ವರಪ್ಪ ಅವರಿಗೆ ಬಿಜೆಪಿ ಪಕ್ಷದಿಂದ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುವುದಾಗಿ ಘೋಷಿಸಿದ್ದರು. ಇನ್ನು ಈಶ್ವರಪ್ಪ ಅವರು ಶಿವಮೊಗ್ಗ ನ್ಯಾಯಾಲಯದಲ್ಲಿ ಮೋದಿ ಫೋಟೋ ಬಳಕೆ ವಿಚಾರವಾಗಿ ಕೆವಿಯಟ್ ಅರ್ಜಿ ಸಲ್ಲಿಸಿರುತ್ತಾರೆ.