ಬೆಂಗಳೂರು, ಏ 05 (DaijiworldNews/AK): ನನ್ನ ಕ್ಷೇತ್ರಕ್ಕೆ ಯಾರು ಸಹಾಯ ಮಾಡುತ್ತಾರೋ ಅವರಿಗೆ ಬೆಂಬಲ ನೀಡುತ್ತೇನೆ. ಅವರ ಪರ ಪ್ರಚಾರ ಮಾಡ್ತೇನೆ. ಬಿಜೆಪಿ ಕೈಯಲ್ಲಿ ಏನು ಮಾಡುವುದಕ್ಕೆ ಆಗುತ್ತೋ ಮಾಡಿಕೊಳ್ಳಲಿ ಎಂದು ಎಸ್ಟಿ ಸೋಮಶೇಖರ್, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.ಯಶವಂತಪುರ ಶಾಸಕ ಎಸ್ಟಿ ಸೋಮಶೇಖರ್ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧವೇ ಪ್ರಚಾರಕ್ಕೆ ಮುಂದಾಗಿದ್ದಾರೆ.
ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಅವರು, ಉಡುಪಿ - ಚಿಕ್ಕಮಗಳೂರಿನಿಂದ ಜನ ಗೋ ಬ್ಯಾಕ್ ಎಂದು ಹೊರ ಹಾಕಿದವರನ್ನು ತಂದು ಇಲ್ಲಿ ಚುನಾವಣೆಗೆ ನಿಲ್ಲಿಸಿದ್ದಾರೆ. ಅಂಥವರನ್ನು ಬೆಂಗಳೂರಿನವರು ಸ್ವಾಗತ ಮಾಡಬೇಕಾ? ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪರ್ಧೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಘೋಷಣೆಯಾಗಿ ಇಷ್ಟು ದಿನ ಆದರೂ ಯಾರೊಬ್ಬರೂ ನನ್ನನ್ನು ಬೆಂಬಲ ಕೊಡಿ ಎಂದು ಕೇಳಿಲ್ಲ. ನನ್ನ ಕ್ಷೇತ್ರದಲ್ಲಿ 7 ರಿಂದ 8 ಬಾರಿ ಪ್ರಚಾರ ಮಾಡಿದ್ದಾರೆ. ಯಾರೂ ನನ್ನನ್ನು ಸಂಪರ್ಕಿಸಿಲ್ಲ ಎಂದು ಆರೋಪಿಸಿದರು.
ಬಿಜೆಪಿಯ ಯಾರು ನನ್ನನ್ನು ಸಂಪರ್ಕ ಮಾಡದೇ ಇದ್ದಿದ್ದಕ್ಕೆ ಸಭೆ ಕರೆದಿದ್ದೇನೆ. ಇಷ್ಟೆಲ್ಲಾ ನಡೆದ ಮೇಲೆ ಸುಮ್ಮನಿದ್ದರೆ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಬಿಜೆಪಿಯವರು ಏನೆಲ್ಲಾ ಅವಮಾನ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ರಾಜ್ಯ ಮಾತ್ರವಲ್ಲದೇ ಕೇಂದ್ರ ನಾಯಕರೂ ನನ್ನ ಸಂಪರ್ಕಿಸಿಲ್ಲ. ಮೊನ್ನೆ ಅಮಿತ್ ಶಾ ಬಂದರು ಕೂಡ ನನಗೆ ಆಹ್ವಾನ ನೀಡಿಲ್ಲ. ಆದ್ದರಿಂದ ನಮ್ಮ ಅವಶ್ಯಕತೆ ಇಲ್ಲದವರ ಬಳಿ ನಾವ್ಯಾಕೆ ಹೋಗಬೇಕು ಎಂದು ಎಸ್ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಮತ್ತೆ ಹೋಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲವನ್ನೂ ಕಾದು ನೋಡಿ. ಈಗ ಬಿಜೆಪಿಯ ಯಾರು ಬಂದು ಕೇಳಿದರೂ ನಾನು ಬೆಂಬಲ ನೀಡಲ್ಲ. ನನಗೆ ಯಾವ ಹೈಕಮಾಂಡ್ ಕೂಡ ಇಲ್ಲ. ನನಗೆ ನನ್ನ ಕ್ಷೇತ್ರದ ಮತದಾರರೇ ಹೈಕಮಾಂಡ್. ಮತದಾರರ ತೀರ್ಮಾನವೇ ನನ್ನ ಅಂತಿಮ ನಿರ್ಧಾರ. ಕಾಂಗ್ರೆಸ್ ಅಭ್ಯರ್ಥಿ ಪರ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತೇನೆ ಎಂದರು.