ಬೆಂಗಳೂರು, ಏ 05 (DaijiworldNews/AA): ಯುಗಾದಿ, ರಂಜಾನ್ ಹಬ್ಬದ ಸಾಲು ಸಾಲು ರಜೆಗಳಿಂದ ಊರಿಗೆ ತೆರಳುವ ಹಾಗೂ ಪ್ರವಾಸಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಲಿದೆ. ಈ ಕಾರಣದಿಂದಲೇ ಕೆಎಸ್ಆರ್ಟಿಸಿ 2000ಕ್ಕೂ ಅಧಿಕ ವಿಶೇಷ ಬಸ್ ಗಳನ್ನು ಬೆಂಗಳೂರಿನಿಂದ ರಸ್ತೆಗಿಳಿಸಲು ಸಜ್ಜಾಗಿದೆ.
ಸಾಲು ಸಾಲು ರಜೆಗಳು ಇರುವುದರಿಂದ ಒಟ್ಟು 2,275 ವಿಶೇಷ ಬಸ್ ಗಳನ್ನು ರಸ್ತೆಗಿಳಿಸಲು ನಾಲ್ಕು ನಿಗಮಗಳು ನಿರ್ಧಾರ ಮಾಡಿದೆ. ಕೆಎಸ್ಆರ್ಟಿಸಿಯಿಂದ 1,750ಬಸ್, ಎನ್ಡಬ್ಲ್ಯೂಕೆಎಸ್ಆರ್ಟಿಸಿಯ 145 ಬಸ್, ಕೆಕೆಆರ್ ಟಿಸಿಯ 200 ಬಸ್ ಮತ್ತು ಬಿಎಂಟಿಸಿಯ 180 ವಿಶೇಷ ಬಸ್ ಗಳು ರಸ್ತೆಗಿಳಿಯಲಿವೆ. ಈ ಬಸ್ ಗಳು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಿಗೆ ತೆರಳುವಂತೆ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು ನಗರದ ಕೆಂಪೇಗೌಡ ನಿಲ್ದಾಣ, ಸ್ಯಾಟಲೈಟ್ ನಿಲ್ದಾಣ, ಶಾಂತಿನಗರದಿಂದ ವಿಶೇಷ ಬಸ್ ಸೇವೆ ದೊರೆಯಲಿದೆ. ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ ಸೇರಿ ಹಲವು ಸ್ಥಳಗಳಿಗೆ ಹೆಚ್ಚುವರಿ ಬಸ್ ಸೇವೆ ದೊರೆಯಲಿದೆ. ಹೊರ ರಾಜ್ಯಗಳ ನಗರಗಳಾದ ಹೈದರಾಬಾದ್, ಚೆನ್ನೈ, ಗೋವಾ ಪಣಜಿ, ಶಿರಡಿ, ಎರ್ನಾಕುಲಂಗೆ ವಿಶೇಷ ಬಸ್ ಸೇವೆ ಲಭ್ಯವಿರಲಿದೆ.