ಕಲಬುರಗಿ, ಏ 05 (DaijiworldNews/AA): ಈ ಬಾರಿಯ ಬಿಸಿಲಿನಿಂದಾಗಿ ಜನರು ಹಾಗೂ ಜಾನುವಾರುಗಳು ಪರದಾಡುವಂತಾಗಿದೆ. ಈ ಹಿನ್ನಲೆ ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಕಲಬುರಗಿ ಪೊಲೀಸ್ ಶ್ವಾನಗಳಿಗೆ ಶೂ ಹಾಕಲಾಗಿದ್ದು, ಈ ಮೂಲಕ ರಾಜ್ಯದಲ್ಲೇ ಮೊದಲ ಬಾರಿಗೆ ಶ್ವಾನಗಳಿಗೆ ಶೂ ಹಾಕುವ ಪ್ರಯೋಗ ಮಾಡಲಾಗಿದೆ.
ಶ್ವಾನಗಳಿಗೆ ಶೂ ಹಾಕುವುದಷ್ಟೇ ಅಲ್ಲದೆ, ಶ್ವಾನಗಳಿಗೆ ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಏರ್ಕೂಲರ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಕಲಬುರಗಿ ಶ್ವಾನದಳದಲ್ಲಿರುವ ರೀಟಾ, ಜಿಮ್ಮಿ, ರಾಣಿ, ರಿಂಕಿ ಎಂಬ ಶ್ವಾನಗಳಿಗೆ ಈ ಶೂ ಭಾಗ್ಯ ದೊರೆತಿದೆ. ಜೊತೆಗೆ ಶ್ವಾನಗಳಿಗೆ ಬಾಯಾರಿಕೆಯಾದರೆ ಸಾಬುದಾಣಿ ಗಂಜಿ, ರಾಗಿ ಗಂಜಿ, ಎಳನೀರನ್ನು ನೀಡಲಾಗುತ್ತಿದೆ.
ಕಲಬುರಗಿ ಜಿಲ್ಲೆಯಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಲೋಕಸಭೆ ಚುನಾವಣೆ ಹಿನ್ನಲೆ ದಿನಪೂರ್ತಿ ಶ್ವಾನದಳ ಕಾರ್ಯಾಚರಣೆಯಲ್ಲಿ ತೊಡಗಿರಬೇಕಾಗುತ್ತದೆ. ಆದ್ದರಿಂದ ಶ್ವಾನಗಳನ್ನು ಬಿಸಿಲಿನಿಂದ ರಕ್ಷಣೆ ಒದಗಿಸಲು ಈ ನೂತನ ಪ್ರಯೋಗ ಮಾಡಲಾಗಿದೆ.