ವಿಜಯಪುರ, ಏ 04(DaijiworldNews/AK): ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ತೋಟದ ಕೊಳವೆ ಬಾವಿಗೆ ಬಿದ್ದ 2 ವರ್ಷದ ಸಾತ್ವಿಕ್ ಕೊನೆಗೆ ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಇದೀಗ ಕೊಳವೆ ಬಾವಿಯಿಂದ ಹೊರತೆಗೆದು ಬಾಲಕನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಬಾಲಕ ಕೊಳವೆ ಬಾವಿಗೆ ಬೀಳುತ್ತಿದ್ದಂತೆಯೇ ರಕ್ಷಣೆಗಾಗಿ ಅಹೋರಾತ್ರಿಯಿಂದಲೇ ಕಾರ್ಯಾಚರಣೆ ನಡೆಸಲಾಯಿತ್ತು. ಇದೀಗ ಸತತ 20 ಗಂಟೆಗಳ ಎನ್ಡಿಆರ್ಎಫ್,ಎಸ್ಡಿಆರ್ಎಫ್ ಕಾರ್ಯಾಚರಣೆ ಯಶಸ್ವಿಯಾಗಿದೆ. ತಲೆ ಕೆಳಗೆ ಬಿದ್ದ ಮಗು ಬದುಕಿ ಉಳಿಯುತ್ತಾ ಎಂಬ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಆದರೆ ಪವಾಡಸ ದೃಶ್ಯದಂತೆ ಸಾತ್ವಿಕ್ ಬದುಕಿದ್ದು ಎಲ್ಲರೂ ನಿಟ್ಟಿಸಿರು ಬಿಟ್ಟಿದ್ದರು.
20 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆಗೆ ಕೊಳವೆಬಾವಿ ಪಕ್ಕದಲ್ಲಿ ಸಮಾನಾಂತರವಾಗಿ 2 ಜೆಸಿಬಿ ಬಳಸಿ ಗುಂಡಿಯನ್ನು ತೋಡಲಾಗಿತ್ತು. ಕೊಳವೆ ಬಾವಿಗೆ ಕ್ಯಾಮೆರಾ ಇಳಿಬಿಟ್ಟು ಬಾಲಕನ ಚಲನವಲನ ಗಮನಿಸಲಾಗುತ್ತಿತ್ತು.
ಸತೀಶ್-ಪೂಜಾ ದಂಪತಿಗೆ ನಾಲ್ಕು ಎಕರೆ ಜಮೀನಿದ್ದು, ನಿಂಬೆ ಮತ್ತು ಕಬ್ಬಿಗೆ ನೀರಿನ ಕೊರತೆ ಎದುರಾಗಿದ್ದ ಹಿನ್ನೆಲೆಯಲ್ಲಿ ಕೊಳವೆ ಬಾವಿ ಕೊರೆಸಿದ್ದರು. ನೀರು ಸಿಕ್ಕಿದ ಹಿನ್ನೆಲೆಯಲ್ಲಿ ಅದನ್ನು ಹಾಗೆಯೇ ಬಿಟ್ಟಿದ್ದರು.