ಬೆಂಗಳೂರು,ಏ 03(DaijiworldNews/AK): ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಎನ್.ಡಿ.ಎ ಅಭ್ಯರ್ಥಿಯಾಗಿ ಕು.ಶೋಭಾ ಕರಂದ್ಲಾಜೆ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ನಾಮಪತ್ರ ಸಲ್ಲಿಸಿದರು.
ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ, ದಾಸರಹಳ್ಳಿ ಶಾಸಕ ಎಸ್. ಮುನಿರಾಜು, ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜು, ವಿಧಾನಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಭಾರತೀ ಶೆಟ್ಟಿ, ಛಲವಾದಿ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಹರೀಶ್, ಚುನಾವಣಾ ಸಂಚಾಲಕ ಸಚ್ಚಿದಾನಂದ ಮೂರ್ತಿ, ರಾಜ್ಯ ಬಿಜೆಪಿ ಕಾರ್ಯದರ್ಶಿ ತಮ್ಮೇಶ್ ಗೌಡ, ಜೆಡಿಎಸ್ ಯಶವಂತಪುರದ ಅಧ್ಯಕ್ಷ ಜವರಾಯಿ ಗೌಡ, ಕಟ್ಟಾ ಜಗದೀಶ್, ಮುರಳಿ, ಮಾಜಿ ಶಾಸಕ ನೆಲ ನರೇಂದ್ರ ಬಾಬು, ಮಾಜಿ ಜಿಲ್ಲಾಧ್ಯಕ್ಷ ನಾರಾಯಣ ಗೌಡ ಹಾಗೂ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಳಿಕ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಗೆದ್ದ ಬಳಿಕ ಬೆಂಗಳೂರು ಉತ್ತರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲಿದ್ದೇನೆ ಎಂದು ತಿಳಿಸಿದರು.
ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯ ಮತ್ತು ನೇತೃತ್ವಕ್ಕೆ ಮೆಚ್ಚುಗೆ ಸೂಚಿಸಿ ಹಾಗೂ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಆಶಯದೊಂದಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಿಜೆಪಿ ಜೊತೆ ಸೇರಿ ಸ್ಪರ್ಧೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ವಿವರಿಸಿದರು.
ಕಾಂಗ್ರೆಸ್ ಪಕ್ಷದ ದುರಾಡಳಿತಕ್ಕೆ ಜನತೆ ತಕ್ಕ ಪಾಠ ಕಲಿಸುವಂತೆ ಅವರು ಮನವಿ ಮಾಡಿದರು. ಮೋದಿಜೀ ಅವರ ಸಾಧನೆಯನ್ನು ಮನೆಮನೆಗೆ ತಲುಪಿಸೋಣ ಎಂದು ಅವರು ಕಾರ್ಯಕರ್ತರಲ್ಲಿ ವಿನಂತಿಸಿದರು. ಬಿಜೆಪಿ ದೊಡ್ಡ ಅಂತರದಲ್ಲಿ ರಾಜ್ಯದೆಲ್ಲೆಡೆ ಗೆಲುವು ಸಾಧಿಸುವಂತಾಗಲಿ ಎಂದು ಅವರು ಆಶಿಸಿದರು.