ನವದೆಹಲಿ, ಏ 02(DaijiworldNews/AK):500 ವರ್ಷಗಳಿಂದ ಟೆಂಟ್ನಲ್ಲಿದ್ದ ರಾಮಲಲಾನಿಗೆ ಭವ್ಯ ರಾಮಮಂದಿರ ನಿರ್ಮಿಸಿದ್ದೇವೆ. ಕಾಂಗ್ರೆಸ್ ಈ ವಿಚಾರದಲ್ಲಿ ನಿರಂತರ ವಿಳಂಬ ಮಾಡಿತ್ತು. ತುಷ್ಟೀಕರಣ- ಮತಬ್ಯಾಂಕಿನ ಕಾರಣಕ್ಕಾಗಿ ರಾಮಮಂದಿರದ ಉದ್ಘಾಟನೆಗೆ ಕೂಡ ಕಾಂಗ್ರೆಸ್ ಮುಖಂಡರು ಹಾಜರಾಗಿಲ್ಲ ಎಂದು ಆಕ್ಷೇಪಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿಯ ಐದು ಲೋಕಸಭಾ ಕ್ಷೇತ್ರಗಳ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಹಾಗೂ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಯುಪಿಎ ಅಧಿಕಾರದಲ್ಲಿದ್ದಾಗ ದೇಶದ ಆರ್ಥಿಕತೆ 11 ನೇ ಸ್ಥಾನದಲ್ಲಿ ಇತ್ತು, ಈಗ 5 ನೇ ಸ್ಥಾನಕ್ಕೆ ಬಂದಿದೆ. ಈಗ ಮತ್ತೆ ಮೋದಿ ಗೆಲ್ಲಿಸಿದರೆ ದೇಶ 3 ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಅವರು ಪ್ರತಿಪಾದಿಸಿದರು. ದೇಶದಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ಪಾಕಿಸ್ತಾನದಿಂದ ಬಂದು ಬಾಂಬ್ ಹಾಕಿ ಹೋಗುತ್ತಿದ್ದರು. ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮೌನವಾಗಿ ಇರುತ್ತಿದ್ದರು. ಆಗ ಏನಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಲಿ ಎಂದು ಅಮಿತ್ ಶಾ ಸವಾಲು ಹಾಕಿದರು.
ಈಗ ಕಾಶ್ಮೀರದಲ್ಲಿ ಒಂದು ಸಣ್ಣ ಕಲ್ಲು ಸಹ ಬಿಸಾಡುವುದಿಲ್ಲ. ಹತ್ತು ವರ್ಷ ಯುಪಿಎ ಅಧಿಕಾರದಲ್ಲಿದ್ದಾಗ ಏನಾಗುತ್ತಿತ್ತು ಎಂಬುದರ ಬಗ್ಗೆ ಸಿದ್ದರಾಮಯ್ಯ ಉತ್ತರಿಸಲಿ. ಪಾಕಿಸ್ತಾನದಿಂದ ಬಂದು ಬಾಂಬ್ ಹಾಕಿ ಹೋದಾಗ ಮನಮೋಹನ್ ಸಿಂಗ್ ಮೌನವಾಗಿರುತ್ತಿದ್ದರು. ಮೋದಿ ಪಾಕಿಸ್ತಾನದ ಒಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿಸಿದರು. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದು ಗೃಹ ಸಚಿವರು ಹೇಳಿದರು.
ಮೋದಿ ಸರ್ಕಾರದಲ್ಲಿ ಎಲ್ಲ ವರ್ಗದವರಿಗೂ ಅನುಕೂಲವಾಗಿದೆ. ಹಿಂದಿನ ಪ್ರಣಾಳಿಕೆಯ ಭರವಸೆ ಈಡೇರಿಸಿ ಮತ ಕೇಳಲು ಬಂದಿದ್ದೇವೆ. ಆರ್ಟಿಕಲ್ 370 ರದ್ದಾದರೆ ರಕ್ತ ಹರಿಯಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿಯವರೇ, ಇದು ಮೋದಿ ಸರ್ಕಾರ. ಆ ರೀತಿ ಏನೂ ನಡೆಯಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದ್ದೇವೆ. ಮತ ಬ್ಯಾಂಕ್ಗಾಗಿ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಅಮಿತ್ ಶಾ ಹೇಳಿದರು.
ಕಾಮನ್ವೆಲ್ತ್, 2 ಜಿ, ಸೇಬು ಮಾರಾಟದ ಹಗರಣ, ಮಂತ್ರಿ ನಿವಾಸ ಹಗರಣ, ಜಮ್ಮು- ಕಾಶ್ಮೀರ ಹಗರಣ, ಆಗಸ್ತ ಹೆಲಿಕಾಪ್ಟರ್ ಹಗರಣ ಸೇರಿ 12 ಲಕ್ಷ ಕೋಟಿಯ ಹಗರಣ ಮಾಡಿದವರು ಇಂಡಿ ಕೂಟದಲ್ಲಿದ್ದಾರೆ. ಮೋದಿಯವರು ಒಂದು ಪೈಸೆಯ ಭ್ರಷ್ಟಾಚಾರ ಮಾಡಿಲ್ಲ ಎಂದು ವಿವರಿಸಿದರು.