ದೆಹಲಿ, ಏ 02(DaijiworldNews/AA): ಅರುಣಾಚಲ ಪ್ರದೇಶದ ಹಲವು ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡಿದೆ. ಚೀನಾದ ಈ ನಡೆಯನ್ನು ಖಂಡಿಸಿ, ಚೀನಾವನ್ನು ವಿದೇಶಾಂಗ ಸಚಿವಾಲಯ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.
ನಾವು ಚೀನಾದ ಈ ಪ್ರಯತ್ನಗಳನ್ನು ತಿರಸ್ಕರಿಸುತ್ತೇವೆ. ಮರುನಾಮಕರಣ ಮಾಡಿದ ಹೆಸರುಗಳನ್ನು ನಿಯೋಜಿಸುವುದರಿಂದ ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂಬ ವಾಸ್ತವತೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿರುಗೇಟು ನೀಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರ್ಕಾರ, ಅರುಣಾಚಲ ಪ್ರದೇಶದ ಹಲವು ಸ್ಥಳಗಳಿಗೆ ಹೊಸ ಹೆಸರುಗಳನ್ನು ಇಡುವುದರಿಂದ ಅದು ಭಾರತದ ಅವಿಭಾಜ್ಯ ಅಂಗ ಎಂಬ ವಾಸ್ತವ ಸಂಗತಿ ಬದಲಾಗುವುದಿಲ್ಲ. ಚೀನಾದ ಈ ಕ್ರಮ ಅರ್ಥಹೀನ. ಭಾರತದ ಅರುಣಾಚಲ ಪ್ರದೇಶದ ಸ್ಥಳಗಳನ್ನು ಮರುಹೆಸರಿಸಲು ಚೀನಾ ತನ್ನ ಅರ್ಥಹೀನ ಪ್ರಯತ್ನಗಳನ್ನು ಮುಂದುವರೆಸಿದೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಹೇಳಿದೆ.
ಇನ್ನು ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು, ಹೆಸರು ಬದಲಿಸುವುದರಿಂದ ದೇಶಕ್ಕೆ ಏನೂ ಲಾಭವಿಲ್ಲ. ನಾನು ನಿಮ್ಮ ಮನೆಯ ಹೆಸರನ್ನು ಬದಲಾಯಿಸಿದರೆ, ಅದು ನನ್ನದಾಗುತ್ತದೆಯೇ? ಅರುಣಾಚಲ ಪ್ರದೇಶವು ಭಾರತದ ರಾಜ್ಯವಾಗಿತ್ತು, ಭಾರತದ ರಾಜ್ಯವಾಗಿದೆ ಮತ್ತು ಭವಿಷ್ಯದಲ್ಲಿ ಭಾರತದ ರಾಜ್ಯವಾಗಿಯೇ ಉಳಿಯುತ್ತದೆ ಎಂದು ಕಿಡಿಕಾರಿದ್ದಾರೆ.