ನವದೆಹಲಿ, ಏ 02(DaijiworldNews/AA): ಸೋಮವಾರದಿಂದ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ಏರಿಕೆ ಮಾಡಲಾಗುತ್ತದೆ ಎಂಬ ಸುದ್ದಿಯ ಬೆನ್ನಲ್ಲೇ ಇದೀಗ ಲೋಕಸಭೆ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಟೋಲ್ ಶುಲ್ಕ ಪರಿಷ್ಕರಣೆಯನ್ನು ಜಾರಿಗೆ ತರದಂತೆ ಚುನಾವಣ ಆಯೋಗವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ ಎಚ್ ಎಐ)ವು ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕವನ್ನು ಸರಾಸರಿ ಶೇ. 5ರಷ್ಟು ಏರಿಕೆ ಮಾಡಿ, ಈ ಪರಿಷ್ಕರಣೆಯ ಶುಲ್ಕವನ್ನು ಏ.1ರಿಂದಲೇ ಜಾರಿ ಮಾಡಲು ನಿರ್ಧಾರ ಮಾಡಿತ್ತು. ಆದರೆ ಇದೀಗ ಪರಿಷ್ಕರಣೆಯ ಶುಲ್ಕವನ್ನು ಚುನಾವಣೆ ಬಳಿಕ ಜಾರಿಗೊಳಿಸುವಂತೆ ಚುನಾವಣಾ ಆಯೋಗ ತಿಳಿಸಿದೆ. ಹೀಗಾಗಿ ಟೋಲ್ ಶುಲ್ಕ ಏರಿಕೆಯ ಸುದ್ದಿಯಿಂದ ಕಂಗಾಲಾಗಿದ್ದ ಜನರಿಗೆ ಸ್ವಲ್ಪ ನಿರಾಳವಾದಂತಾಗಿದೆ.
ಇನ್ನು ಟೋಲ್ ಶುಲ್ಕವಷ್ಟೇ ಅಲ್ಲದೇ ವಿದ್ಯುತ ದರ ಪರಿಷ್ಕರಣೆಯ ಜಾರಿಯನ್ನೂ ಮುಂದೂಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಚುನಾವಣೆ ಮುಗಿದ ಬಳಿಕವೇ ಪರಿಷ್ಕೃತ ದರಗಳು ಜಾರಿಗೊಳಿಸುವಂತೆ ಆಯೋಗ ತಿಳಿಸಿದೆ.