ಬೆಂಗಳೂರು, ಏ 02(DaijiworldNews/AA): ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಂದಾಯ ಮಾಡಿದ್ದ ಹೆಚ್ಚುವರಿ ಶುಲ್ಕವನ್ನು ಅಭ್ಯರ್ಥಿಗಳು ವಾಪಸ್ ಪಡೆಯಬಹುದಾಗಿದೆ. ಹೆಚ್ಚುವರಿ ಶುಲ್ಕವನ್ನು ವಾಪಸ್ ಪಡೆಯಲು ಅಭ್ಯರ್ಥಿಗಳು ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಏ.10ರ ಒಳಗೆ ಸಲ್ಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸೂಚನೆ ನೀಡಿದೆ.
ಪರೀಕ್ಷೆಯ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಮೊತ್ತವನ್ನು ಸಂದಾಯ ಮಾಡಿರುವ ಹಾಗೂ ವಿವಿಧ ಹಂತಗಳಲ್ಲಿ ಸೀಟುಗಳನ್ನು ರದ್ದು ಮಾಡಿಕೊಂಡಿರುವ ಅಭ್ಯರ್ಥಿಗಳು ಶುಲ್ಕವನ್ನು ವಾಪಸ್ ಪಡೆಯಲು ಅರ್ಹರಾಗಿದ್ದಾರೆ. ಬ್ಯಾಂಕ್ ಖಾತೆಗಳ ವಿವರ ಸರಿ ಇರುವ ಅಭ್ಯರ್ಥಿಗಳ ಖಾತೆಗೆ ಹಣ ಜಮೆಯಾಗಿದ್ದು, ಖಾತೆಗಳ ವಿವರ ಲಭ್ಯವಾಗದ 1,800 ಅಭ್ಯರ್ಥಿಗಳಿಗೆ ಹಣ ವರ್ಗಾವಣೆಗೊಂಡಿರುವುದಿಲ್ಲ.
2022-23 ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಶುಲ್ಕವನ್ನು ಸಂದಾಯ ಮಾಡಿದ್ದ ವಿದ್ಯಾರ್ಥಿಗಳ ಪೈಕಿ 1,436 ಎಂಜಿನಿಯರಿಂಗ್ ಮತ್ತು 324 ವೈದ್ಯಕೀಯ ವಿದ್ಯಾರ್ಥಿಗಳಿಗೆ ಸುಮಾರು 6 ಕೋಟಿ ಹಣ ಮರುಪಾವತಿಯಾಗಬೇಕಿದೆ. ಇನ್ನು ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳೂ ಕೂಡ ತಮ್ಮ ಹೆಚ್ಚುವರಿ ಶುಲ್ಕವನ್ನು ಹಿಂತಿರುಗಿ ಪಡೆಯಬಹುದಾಗಿದೆ ಎಂದು ಕೆಇಎ ಮಾಹಿತಿ ನೀಡಿದೆ.