ಬೆಂಗಳೂರು, ಏ. 01 (DaijiworldNews/AK): ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಹಿಂದಿನ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಏಪ್ರಿಲ್ 2ರಂದು ಕರ್ನಾಟಕಕ್ಕೆ ಆಗಮಿಸಲಿದ್ದು, ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶಕ್ತಿ ಕೇಂದ್ರ ಮೇಲ್ಪಟ್ಟ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸುವರು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್ ಕುಮಾರ್ ಅವರು ತಿಳಿಸಿದರು.
ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜವಾಬ್ದಾರಿ ಇರುವ 5 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದು, ನೇರವಾಗಿ 5 ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರ ಜೊತೆ ನಮ್ಮ ನಾಯಕರು ಮಾತನಾಡಲಿದ್ದಾರೆ. ಬಳಿಕ ಚನ್ನಪಟ್ಟಣದಲ್ಲಿ ರೋಡ್ ಷೋ ಇರುತ್ತದೆ. ಮೊದಲ ಹಂತದಲ್ಲಿ ನಡೆಯುವ 14 ಲೋಕಸಭಾ ಕ್ಷೇತ್ರಗಳ ಚುನಾವಣೆ ಮೇಲೆ ದೊಡ್ಡ ಪರಿಣಾಮ ಉಂಟಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರವಾಸದ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಪೂರ್ಣಗೊಳಿಸಿದ್ದೇವೆ. ಇವೆರಡು ಕಾರ್ಯಕ್ರಮದ ಹೊರತಾಗಿ ನಡುವಿನ ಸಮಯಾವಕಾಶದಲ್ಲಿ ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಚಿತ್ರದುರ್ಗ ಬೀದರ್, ಬೆಳಗಾವಿ ಜಿಲ್ಲೆಗಳ ಕೋರ್ ಕಮಿಟಿ ಸದಸ್ಯರ ಜೊತೆ ಅಮಿತ್ ಶಾ ಅವರು ಮಾತುಕತೆ ಮಾಡಲಿದ್ದಾರೆ. ಈ ಮೂಲಕ ಚುನಾವಣಾ ಸಿದ್ಧತೆ ಮಾಡಲಿದ್ದಾರೆ ಎಂದು ವಿವರಿಸಿದರು.
ಬೆಂಗಳೂರು ಗ್ರಾಮಾಂತರದಲ್ಲಿ ಗೆಲುವು:
ಥೋಡೋ ವಿರುದ್ಧ ಜೋಡೋ ಇದು ಕರ್ನಾಟಕ ಚುನಾವಣೆಯ ಘೋಷಣೆ. ಕಳೆದ ಬಾರಿ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿತ್ತು. ಈ ಬಾರಿ ಮೊದಲ ವಿಜಯ ಅಲ್ಲಿಂದಲೇ ಆರಂಭವಾಗಲಿದೆ. ಆ ಕಾರಣಕ್ಕಾಗಿ ಅಲ್ಲಿಂದಲೇ ಚುನಾವಣಾ ಪ್ರಚಾರ ಆರಂಭಿಸುತ್ತೇವೆ ಎಂದು ಸುನೀಲ್ ಕುಮಾರ್ ಅವರು ವಿವರಿಸಿದರು.
ನಮ್ಮ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯು ರಾಜ್ಯ ನಾಯಕರ ಉಪಸ್ಥಿತಿಯಲ್ಲಿ ನಡೆಯುತ್ತಿದೆ ಎಂದರಲ್ಲದೆ, ಬಿಜೆಪಿ 200ಕ್ಕಿಂತ ಹೆಚ್ಚು ಸೀಟು ಗೆಲ್ಲುವುದಿಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಕುರಿತು ಪ್ರಸ್ತಾಪಿಸಿದ ಅವರು, 400ರ ಸಂಖ್ಯೆ ದಾಟುವ ಗುರಿಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ದೇಶದಲ್ಲಿ 400 ಸೀಟು ಗೆಲ್ಲುವುದು ನಮಗೆ ಗೊತ್ತಿದೆ. ನೀವು ಕರ್ನಾಟಕದಲ್ಲಿ ಖಾತೆ ತೆರೆದರೆ ಸಾಕು ಎಂದು ಸವಾಲೆಸೆದರು.
400 ಸೀಟು ಗೆಲ್ಲಲು ಕರ್ನಾಟಕದ ಎಲ್ಲ ಸೀಟುಗಳನ್ನೂ ರಾಜ್ಯದ ಜನತೆ ಗೆಲ್ಲಿಸಿಕೊಡಲಿದ್ದಾರೆ ಎಂದು ನುಡಿದರು. ಬಿಜೆಪಿಯ 400ರ ಗುರಿಯ ಕುರಿತು ನೀವು ಚಿಂತಿಸಬೇಡಿ ಎಂದು ತಿಳಿಸಿದರು.
ನಾವು ಜೆಡಿಎಸ್ ಜೊತೆ ಹೇಗೆ ಹೊಂದಾಣಿಕೆ ಮಾಡಬೇಕೆಂಬುದು ನಮಗೆ ಗೊತ್ತಿದೆ. ಡಿ.ಕೆ.ಶಿವಕುಮಾರ್ ಅವರು ತಮ್ಮ ಕಾರ್ಯಕರ್ತರನ್ನು ಹೇಗೆ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಬೇಕಾದ ಪ್ರಯತ್ನ ಮಾಡಲಿ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.