ವದೆಹಲಿ, ಏ. ೦೧ (DaijiworldNews/AK):ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಲೋಕಸಭಾ ಚುನಾವಣೆ ಮುಗಿಯುವರೆಗೂ ಬಾಕಿ ಉಳಿಸಿಕೊಂಡಿರುವ ಸುಮಾರು 3,500 ಕೋಟಿ ರೂ. ತೆರಿಗೆ ವಸೂಲಿ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಭರವಸೆ ನೀಡಿದೆ.
ಆದಾಯ ತೆರಿಗೆ ಇಲಾಖೆ ಒಟ್ಟು 3,567 ಕೋಟಿ ರೂ. ಬಾಕಿ ತೆರಿಗೆ ಪಾವತಿಸುವಂತೆ ನೀಡಿದ ನೋಟಿಸ್ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನ್ಯಾ. ಬಿ.ವಿ.ನಾಗರತ್ನ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಚುನಾವಣೆ ನಡೆಯುತ್ತಿರುವುದರಿಂದ ಮತ್ತು ಚುನಾವಣೆಯ ನಂತರದ ವಿಚಾರಣೆಯವರೆಗೆ ಬಾಕಿ ಉಳಿಸಿರುವ ತೆರಿಗೆ ವಸೂಲಿ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ದಯವಿಟ್ಟು ಜೂನ್ ಎರಡನೇ ವಾರದಲ್ಲಿ ಈ ವಿಚಾರವನ್ನು ಪಟ್ಟಿ ಮಾಡಿ ಎಂದು ಮನವಿ ಮಾಡಿದರು.
ಸರ್ಕಾರದ ಈ ಮನವಿಯನ್ನು ಕೇಳಿ ನ್ಯಾ. ನಾಗರತ್ನ ಅವರು, ನೀವು ಯಾರೊಬ್ಬರ ಬಗ್ಗೆ ಯಾವಾಗಲೂ ನಕಾರಾತ್ಮಕವಾಗಿ ಗ್ರಹಿಸಬಾರದು ಎಂದು ಕಾಂಗ್ರೆಸ್ ಪರ ಹಾಜರಾಗಿದ್ದ ವಕೀಲ ಅಭಿಷೇಕ್ ಮನು ಸಿಂಘ್ವಿ ಲಘುವಾಗಿ ಹೇಳಿದರು. ಕೇಂದ್ರ ಸರ್ಕಾರದ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ ಎರಡನೇ ವಾರಕ್ಕೆ ಮುಂದೂಡಿತು.