ಕೋಲ್ಕತ್ತಾ, ಮಾ 30(DaijiworldNews/AA): ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಹಾಗೂ ಭೂ ಕಬಳಿಸುತ್ತಿದ್ದ ಪ್ರಕರಣದ ಪ್ರಮುಖ ಆರೋಪಿ ಟಿಎಂಸಿ ಮಾಜಿ ನಾಯಕ ಶೇಖ್ ಷಹಜಹಾನ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಸಿರ್ಹತ್ ನ್ಯಾಯಾಲಯದಿಂದ ಇಡಿ ಅಧಿಕಾರಿಗಳು ಅನುಮತಿ ಪಡೆದು, ಷಹಜಹಾನ್ ಅವರನ್ನು ವಶಕ್ಕೆ ಪಡೆದಿದ್ದರು. ಷಹಜಹಾನ್ ಅವರನ್ನು ವಶಕ್ಕೆ ಪಡೆದ ಅಧಿಕಾರಿಗಳು, 4 ಗಂಟೆ ತೀವ್ರ ವಿಚಾರಣೆ ನಡೆಸಿ, ಇದೀಗ ಅವರನ್ನು ಬಂಧಿಸಿದ್ದಾರೆ. ಸೋಮವಾರ ಇಡಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಲೈಂಗಿಕ ದೌರ್ಜನ್ಯ ಎಸಗಿ ಭೂಕಬಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಷಹಜಹಾನ್ ವಿರುದ್ಧ ಸಂದೇಶಖಾಲಿಯಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಷಹಜಹಾನ್ 55 ದಿನಗಳ ಕಾಲ ತಲೆಮರೆಸಿಕೊಂಡಿದ್ದರು. ಈ ಪ್ರತಿಭಟನೆಯ ಬಳಿಕ ಷಹಜಹಾನ್ ಅವರನ್ನು ಬಂಧಿಸಲಾಗಿತ್ತು.