ಉತ್ತರ ಪ್ರದೇಶ, ಮಾ 29(DaijiworldNews/AA): ಸಾಮಾನ್ಯವಾಗಿ ಯುಪಿಎಸ್ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಐಎಎಸ್, ಐಪಿಎಸ್ ಅಧಿಕಾರಿಗಳ ಯಶಸ್ಸಿನ ಕಥೆಯಿಂದ ಪ್ರೇರಿಣೆ ಪಡೆದುಕೊಳ್ಳುತ್ತಾರೆ. ಆದರೆ ಈ ಕುಟುಂಬದ ನಾಲ್ವರು ಬೇರೆಯವರಿಂದ ಪ್ರೇರಣೆಯನ್ನು ಪಡೆಯದೇ ತಮ್ಮ ಒಡಹುಟ್ಟಿದವರಿಂದಲೇ ಪ್ರೇರಣೆ ಪಡೆದು ಯುಪಿಎಸ್ಸಿ ಪರೀಕ್ಷೆಯನ್ನು ಬರೆದಿದ್ದಾರೆ. ಈ ಮೂಲಕ ಒಂದೇ ಕುಟುಂಬದ ನಾಲ್ವರು ಒಡಹುಟ್ಟಿದವರು ಮೂರೇ ವರ್ಷದಲ್ಲಿ ಯುಪಿಎಸ್ಸಿ ಪರೀಕ್ಷೆ ಭೇದಿದ್ದಾರೆ.
ಉತ್ತರ ಪ್ರದೇಶದ ಮೂಲದ ಪ್ರತಾಪಗಢದ ಮಿಶ್ರಾ ಕುಟುಂಬದ ಈ ನಾಲ್ವರು ಒಡಹುಟ್ಟಿದವರು ಒಬ್ಬರಾದ ಬಳಿಕ ಒಬ್ಬರಂತೆ ಯುಪಿಎಸ್ಸಿ ಪರೀಕ್ಷೆ ಬರೆದು ಐಎಎಸ್-ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಈ ಕುಟುಂಬದ ಯೋಗೇಶ್ ಮಿಶ್ರಾ ಎಂಬುವವರು 2013ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದರು. ಯೋಗೇಶ್ ಮಿಶ್ರಾ ಅವರೇ ಈ ಕುಟುಂಬದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಮೊದಲಿಗರು. ಇನ್ನು 2015ರಲ್ಲಿ ಯೋಗೇಶ್ ಮಿಶ್ರಾ ಅವರ ಸಹೋದರಿ ಮಾಧವಿ ಮಿಶ್ರಾ ಅವರು ಕೂಡ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗುತ್ತಾರೆ.
ಯೋಗೇಶ್ ಮಿಶ್ರಾ ಅವರ ಸಹೋದರಿ ಕ್ಷಮಾ ಮಿಶ್ರಾ ಅವರು 2016 ರಲ್ಲಿ ನಾಲ್ಕನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿ ಐಪಿಎಸ್ ಅಧಿಕಾರಿಯಾಗುತ್ತಾರೆ. ಇನ್ನುಳಿದಂತೆ ಯೋಗೇಶ್ ಮಿಶ್ರಾ ಅವರ ಕಿರಿಯ ಸಹೋದರ ಲೋಕೇಶ್ ಮಿಶ್ರಾ ಕೂಡ ಯುಪಿಎಸ್ಸಿ ಬರೆದು ಐಎಎಸ್ ಅಧಿಕಾರಿಯಾಗುತ್ತಾರೆ. ಇದರೊಂದಿಗೆ ಒಂದೇ ಕುಟುಂಬದ ನಾಲ್ವರು ಒಡಹುಟ್ಟಿದವರು ಯುಪಿಎಸ್ಸಿ ಪರೀಕ್ಷೆ ಬರೆದು ಐಎಎಸ್-ಐಪಿಎಸ್ ಅಧಿಕಾರಿಗಳಾಗುವಲ್ಲಿ ಯಶಸ್ವಿಯಾಗುತ್ತಾರೆ.
ಪ್ರಸ್ತುತ ಯೋಗೇಶ್ ಮಿಶ್ರಾ ಅವರು ಐಎಎಸ್ ಅಧಿಕಾರಿ ಯೋಗೇಶ್ ಮಿಶ್ರಾ ಅವರು ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದಾರೆ. ಮಾಧವಿ ಮಿಶ್ರಾ ಅವರು ರಾಮಗಢದ ಜಾರ್ಖಂಡ್ ಜಿಲ್ಲೆಯಲ್ಲಿ ಡೆಪ್ಯೂಟಿ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ಷಮಾ ಮಿಶ್ರಾ ಅವರು ಬೆಂಗಳೂರಿನಲ್ಲಿ ರಾಜ್ಯ ಪೊಲೀಸ್ ಲೈನ್ನ ಕಮಾಂಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಲೋಕೇಶ್ ಮಿಶ್ರಾ ಅವರು ಜಾರ್ಖಂಡ್ ಜಿಲ್ಲೆಯ ಕೊಡೆರ್ಮಾದಲ್ಲಿ ಡಿಸಿಸಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಈ ನಾಲ್ವರು ಒಡಹುಟ್ಟಿದವರು ಹಲವಾರು ಯುಪಿಎಸ್ಸಿ ಅಭ್ಯರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ.