ನವದೆಹಲಿ,ಮಾ 28(DaijiworldNews/ AK): ಅತ್ಯಂತ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ UPSC ಪಾಸಾಗಲು ಬಹುತೇಕರಿಗೆ ಸಾಧ್ಯವಾಗೋದೇ ಇಲ್ಲ. ಈ ಪರೀಕ್ಷೆ ಉತ್ತೀರ್ಣರಾಗಲು ಬಯಸಿದರೆ ಆಕಾಂಕ್ಷಿಗಳು ವರ್ಷಗಳ ಪ್ರಯತ್ನ, ತಾಳ್ಮೆ, ಉತ್ಸಾಹ ಮತ್ತು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ಇದರ ಯಶಸ್ಸಿಗೆ ಒಂದೇ ಸೂತ್ರವನ್ನು ಅಳವಡಿಸಿಕೊಂಡ ಮಂಗೇಶ್ ಖಿಲಾರಿ ಅವರ ಯುಪಿಎಸ್ಸಿಯ ಅಸಕ್ತಿದಾಯಕ ಯಶಸ್ಸಿನ ಕಥೆ ಇಲ್ಲಿದೆ.
ಕಾಲೇಜು ಮುಗಿಸಿದ ನಂತರ ತಮ್ಮ ತಂದೆಯ ಟೀ ಅಂಗಡಿ ನಡೆಸಲು ಸಹಾಯ ಮಾಡಿದ ಮಂಗೇಶ್ ಖಿಲಾರಿ ಅವರು 2022 ರ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 396 ನೇ ಸ್ಥಾನವನ್ನು ಪಡೆದುಕೊಂಡರು.ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ಸಂಗಮನೇರ್ ತಾಲೂಕಿನ ಸುಕೆವಾಡಿ ಗ್ರಾಮದವರಾದ ಮಂಗೇಶ್ ಖಿಲಾರಿ ಅವರ ಸಾಧನೆಗೆ ಪೋಷಕರ ಬೆಂಬಲದೊಂದಿಗೆ ಯಶಸ್ಸಿನ ಮೆಟ್ಟಿಲೇರಿದ್ದಾರೆ.
ಮಂಗೇಶ್ ಖಿಲಾರಿ ತನ್ನ 10 ನೇ ತರಗತಿಯನ್ನು ಗ್ರಾಮದಲ್ಲಿ ಮುಗಿಸಿದ ನಂತರ ಸಂಗಮ್ನೇರ್ ತಾಲೂಕಿಗೆ ಸ್ಥಳಾಂತರಗೊಂಡರು. ನಂತರ, ಪುಣೆಯಲ್ಲಿ ರಾಜಕೀಯ ವಿಜ್ಞಾನ ಪದವಿ ಪಡೆದರು. ಯುಪಿಎಸ್ಸಿ ಪರೀಕ್ಷೆ ಅಧ್ಯಯನ ಮಾಡುವ ವೇಳೆ ಎರಡು ಬಾರಿ ಸಂದರ್ಶನದ ಹಂತವನ್ನು ತಲುಪಿದ ನಂತರ ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ಅವರು ಮೊದಲು ಮೂರು ಅಂಕಗಳಿಂದ ರ್ಯಾಂಕ್ ಕಳೆದುಕೊಂಡಿದ್ದರು. ಆದರೆ ಛಲಬಿಡದೆ ಮಂಗೇಶ್ ಖಿಲಾರಿ ಸಾಧನೆ ಮಾಡಿದ್ದಾರೆ. ಮುಂಗೇಶ್ ಪ್ರತಿದಿನ 15-16 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಅಲ್ಲದೇ ಸಾಮಾಜಿಕ ಮಾಧ್ಯಮ ಬಳಸುವುದನ್ನು ನಿಲ್ಲಿಸಿದ್ದರು. ಕೊನೆಗೆ ಮಂಗೇಶ್ ಖಿಲಾರಿ ಕಷ್ಟಪಟ್ಟು ಅಧ್ಯಯನ ನಡೆಸಿ ಯುಪಿಎಸ್ಸಿಯಲ್ಲಿ ರ್ಯಾಂಕ್ ಪಡೆಯಲು ಸಾಧ್ಯವಾಗಿದೆ.