ಬೆಂಗಳೂರು,ಮಾ 27(DaijiworldNews/ AK): ಕಾಂಗ್ರೆಸ್ ನಾಯಕರು ಸೋಲಿನ ಹತಾಶೆಯಿಂದ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆರೋಪಿಸಿದರು.
ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದಲ್ಲಿ ಇಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಸೋಲು ಕಣ್ಮುಂದೆ ಬಂದಾಗ ಯಾವನೇ ಒಬ್ಬ ಮನುಷ್ಯ ಹತಾಶನಾಗುತ್ತಾನೆ. ಬುದ್ಧಿ ಸ್ಥಿಮಿತ ಕಳಕೊಂಡಾಗ ಈ ಥರದ ಹೇಳಿಕೆಗಳು ಬರುತ್ತವೆ ಎಂದು ವಿಶ್ಲೇಷಿಸಿದರು.ಕಾಂಗ್ರೆಸ್, ಒಂದು ರೀತಿ ಸೋಲನ್ನು ಈಗಲೇ ಒಪ್ಪಿಕೊಂಡಂತೆ ಬುದ್ಧಿ ಭ್ರಮಣೆಗೆ ಒಳಗಾದಂತಿದೆ ಎಂದು ತಿಳಿಸಿದರು.
ಮೋದಿಯವರ ಜಾತಿ ಕುರಿತ ಹೇಳಿಕೆಗೆ ರಾಹುಲ್ ಗಾಂಧಿಯವರು ಕಂಬಿ ಎಣಿಸಲು ಕೋರ್ಟ್ ಆದೇಶವಾಗಿದೆ. ಅವರು ಜಾಮೀನಿನಲ್ಲಿದ್ದಾರೆ. ಇಷ್ಟಾದರೂ ಕೂಡ ‘ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ’ ಎಂಬಂತೆ ರಾಹುಲ್ ಗಾಂಧಿಯ ರಾಹು, ರಾಹುಕೇತುಗಳಂತೆ ಇಡೀ ಕಾಂಗ್ರೆಸ್ಸಿಗೆ ಅಂಟಿಕೊಂಡಂತಿದೆ ಎಂದು ಅವರು ಟೀಕಿಸಿದರು.
ತಂಗಡಗಿ ಹೇಳಿಕೆ ತಿರುಗುಬಾಣ:
ತಂಗಡಗಿ ಹಿಂದೆ ಬಿಜೆಪಿಯಲ್ಲಿದ್ದರು. ಸಚಿವರೂ ಆಗಿದ್ದರು. ಸಕ್ಕರೆ ತಿನ್ನಲು ಬಿಟ್ಟಿದ್ದೆವು. ಆಗ ಸೋನಿಯಾ ಗಾಂಧಿಗೆ ಹೊಡೆಯಿರಿ ಎನ್ನುತ್ತಿದ್ದರು. ಈಗ ಕಾಂಗ್ರೆಸ್ಸಿನಲ್ಲಿದ್ದಾಗ ಮೋದಿಗೆ ಹೊಡೆಯಿರಿ ಎನ್ನುತ್ತಾರೆ. ಬಿಜೆಪಿಯಲ್ಲಿದ್ದಾಗ ಸೋನಿಯಾಗೆ ಹೊಡೆಯಿರಿ ಎನ್ನುತ್ತಾರೆ. ಮುಂದೆ ಜನರು ತಂಗಡಗಿಗೇ ಹೊಡೆಯಿರಿ ಎಂದು ಭಾವಿಸಿಯಾರು. ಅವರ ಹೇಳಿಕೆ ಅವರಿಗೇ ತಿರುಗುಬಾಣವಾಗುವ ಸ್ಥಿತಿಯನ್ನು ನಾವು ನೋಡುತ್ತಿದ್ದೇವೆ ಎಂದು ಆರ್.ಅಶೋಕ ಅವರು ತಿಳಿಸಿದರು.ಕರ್ನಾಟಕದ ಸಂಸ್ಕಂತಿಯನ್ನು ಎತ್ತಿ ಹಿಡಿಯಬೇಕಾದ ಸುಸಂಸ್ಕಂತಿ ಸಚಿವರಾ ಇವರು? ಎಂದು ಪ್ರಶ್ನಿಸಿದರು. ಅವರು ಆ ಖಾತೆಗೆ ಲಾಯಕ್ಕಾ ಎಂಬುದನ್ನು ಕಾಂಗ್ರೆಸ್ ಪಕ್ಷ ಯೋಚಿಸಲಿ ಎಂದು ತಿಳಿಸಿದರು.
ಒಬ್ಬ ಶಿಕ್ಷಣ ಸಚಿವ ಹೇಗಿರಬೇಕು? ಒಬ್ಬ ಸಂಸ್ಕಂತಿ ಸಚಿವ ಹೇಗಿರಬೇಕು? ಈ ರೀತಿ ಸಚಿವ ಇರಬೇಕೆಂದು ಜನ ಯೋಚಿಸುತ್ತಾರೆ. ಸಂಸ್ಕಂತಿ ಇಲ್ಲದವರು ಸಂಸ್ಕಂತಿ ಸಚಿವರು. ರಾಜ್ಯಕ್ಕೆ ನೀರು ಕೊಡಲು ಯೋಗ್ಯತೆ ಇಲ್ಲದವರು ನೀರಾವರಿ ಸಚಿವರು. ಕೆಆರ್ಎಸ್ ಖಾಲಿ; ಆಲಮಟ್ಟಿ ಖಾಲಿ. ಕಬಿನಿ ಖಾಲಿ. ಈ ಖಾಲಿ ಮಾಡುವವರೇ ನೀರಾವರಿ ಸಚಿವರಾಗಿದ್ದಾರೆ ಎಂದು ಆರ್.ಅಶೋಕ ಅವರು ವ್ಯಂಗ್ಯವಾಗಿ ತಿಳಿಸಿದರು.
ಹಿಂದೆ ಚಾಯ್ವಾಲಾ ಎಂದಿದ್ದರು. ಬಳಿಕ ಚಾಯ್ ಪೇ ಚರ್ಚಾ ಬಂತು. ಭಾರತದಲ್ಲಿ ಚಾಯ್ವಾಲಾ ಕೂಡ ಪ್ರಧಾನಿ ಆಗಲು ಸಾಧ್ಯ ಎಂಬ ಸಂದೇಶ ನೀಡಲಾಗಿದೆ. ಆಮೇಲೆ ಚೌಕಿದಾರ್ ಚೋರ್ ಎಂದರು. ನಾವು ಅದನ್ನೇ ಅಸ್ತ್ರ ಮಾಡಿಕೊಂಡೆವು ಎಂದು ವಿವರಿಸಿದರು. ಆಗಲಾದರೂ ಕಾಂಗ್ರೆಸ್ ಬುದ್ಧಿ ಕಲಿಯಬೇಕಿತ್ತು ಎಂದರು.
ಲಾಲೂ ಪ್ರಸಾದ್ ಯಾದವ್ ಅವರು ಮೋದಿಯವರಿಗೆ ಪರಿವಾರ ಇಲ್ಲ ಎಂದರು. ನಾವು ಬಿಜೆಪಿಯವರು ಇಡೀ ದೇಶವೇ ಮೋದಿ ಪರಿವಾರ ಎಂದು ಉತ್ತರ ಕೊಟ್ಟೆವು. ಈಗ ಶಿವರಾಜ್ ತಂಗಡಗಿ ಅವರು ಕೂಡ ನಾಲಿಗೆ ಹರಿಬಿಟ್ಟಿದ್ದಾರೆ. ಮೋದಿಯವರಿಗೆ ಜೈ ಎನ್ನುವವರಿಗೆ ಕಪಾಳಕ್ಕೆ ಹೊಡೆಯಿರಿ ಎಂದಿದ್ದಾರೆ. ಈ ಹಿಂದೆ ಚಿತ್ರದುರ್ಗದಲ್ಲಿ ಒಬ್ಬರು ಮೋದಿಯವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಿದರು.