ಬೆಂಗಳೂರು, ಮಾ 26(DaijiworldNews/ AK): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿರುವ ಜೆಡಿಎಸ್ ಕೊನೆಗೂ ಅಭ್ಯರ್ಥಿಗಳ ಆಯ್ಕೆ ಅಂತಿಮ ಮಾಡಿದೆ. ಕೋಲಾರ, ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ನಿರೀಕ್ಷೆಯಂತೆ ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಲಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಮಲ್ಲೇಶ್ ಬಾಬುಗೆ ನೀಡಲಾಗಿದೆ. ಇನ್ನು ತೀವ್ರ ಕುತೂಲಕ್ಕೆ ಕಾರಣವಾಗಿದ್ದ ಮಂಡ್ಯ ಕ್ಷೇತ್ರದಿಂದ ಎಚ್.ಡಿ ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲಿದ್ದಾರೆ.
ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅಥವಾ ಎಚ್ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕೆಂದು ಜಿಲ್ಲೆಯ ನಾಯಕ, ಮುಖಂಡರು ಆಗ್ರಹಿಸಿದ್ದರು.
ಆದ್ರೆ, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದರಿಂದ ಅನಿವಾರ್ಯವಾಗಿ ಕುಮಾರಸ್ವಾಮಿಯೇ ಕಣಕ್ಕೆ ಇಳಿದಿದ್ದಾರೆ. ಕುಮಾರಸ್ವಾಮಿ ಅವರು ಚನ್ನಪಟ್ಟಣ ಬಿಟ್ಟು ಮಂಡ್ಯಗೆ ಹೋಗಬಾರದು ಎಂದು ಚನ್ನಪಟ್ಟಣ ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಆದ್ರೆ, ಕುಮಾರಸ್ವಾಮಿಯೇ ಮಂಡ್ಯ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರ ಒತ್ತಡಕ್ಕೆ ಮಣಿದಿದ್ದಾರೆ.
ಮೂಲಗಳ ಪ್ರಕಾರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಎದುರಾಗುವ ಉಪಚುನಾವಣೆಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಎಚ್ಡಿಕೆ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿ ಸಿಪಿ ಯೋಗೇಶ್ವರ್ ಅವರು ಬಿಟ್ಟು ಕೊಡುತ್ತಾರಾ ಎನ್ನುವುದೇ ಕುತೂಹಲಕಾರಿ ಪ್ರಶ್ನೆ.