ನವದೆಹಲಿ, ಮೇ01(Daijiworld News/SS): ಪ್ರಧಾನಿ ಮೋದಿ ಅವರ ಹೇಳಿಕೆ ಕುರಿತು ಪಶ್ಚಿಮ ಬಂಗಾಲದ ತೃಣಮೂಲ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ಪದೇ ಪದೇ ದೂರು ನೀಡುತ್ತಲೇ ಇದೆ. ಈ ನಡುವೆ 40 ಟಿಎಂಸಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಮೋದಿ ಹೇಳಿಕೆ ನೀಡಿದ್ದು, ಅವರ ನಾಮಪತ್ರವನ್ನು ಅಸಿಂಧುಗೊಳಿಸಬೇಕು ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಈಗಾಗಲೇ ಈ ಕುರಿತು ಪತ್ರ ಬರೆದಿರುವ ಟಿಎಂಸಿ, ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯು ಅವರು ಕುದುರೆ ವ್ಯಾಪಾರದಲ್ಲಿ ತೊಡಗಿರುವುದನ್ನು ಸೂಚಿಸಿದೆ. ಇಂಥ ಪ್ರಚೋದನಕಾರಿ ಮತ್ತು ಪ್ರಜಾಸತ್ತಾತ್ಮಕವಲ್ಲದ ಹೇಳಿಕೆ ನೀಡಿರುವ ಕಾರಣ ಮೋದಿಯವರ ನಾಮಪತ್ರವನ್ನೇ ರದ್ದು ಮಾಡಬೇಕು ಎಂದು ಮನವಿ ಮಾಡಿಕೊಂಡಿದೆ.
ನಾಚಿಕೆಬಿಟ್ಟು ಮೋದಿಯವರು ಕುದುರೆ ವ್ಯಾಪಾರವನ್ನು ಮಾಡುತ್ತಿದ್ದಾರೆ. ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಅವರ ನಾಮಪತ್ರವನ್ನು ಅಸಿಂಧುಗೊಳಿಸಬೇಕು ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಮಾತ್ರವಲ್ಲ, ಇದೇ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ನಾಯಕ ಅಖೀಲೇಶ್ ಯಾದವ್, ಪ್ರಧಾನಿ ಮೋದಿ ಅವರಿಗೆ 72 ಗಂಟೆಗಳ ಕಾಲ ಪ್ರಚಾರಕ್ಕೆ ನಿಷೇಧ ಹೇರಬೇಕು ಎಂದು ಆಯೋಗಕ್ಕೆ ಮನವಿ ಮಾಡಿದ್ದಾರೆ.