ನವದೆಹಲಿ,ಮಾ 24(DaijiworldNews/AK): ಇಂದು ನಿವೃತ್ತ ವಾಯುಸೇನೆ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಸಮ್ಮುಖದಲ್ಲಿ ಭದೌರಿಯಾ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ರಫೇಲ್ ಫೈಟರ್ ಜೆಟ್ ಅನ್ನು ಹಾರಿಸಿದ ಮೊದಲ ಭಾರತೀಯ ವಾಯುಪಡೆಯ ಅಧಿಕಾರಿಗಳಲ್ಲಿ ಭದೌರಿಯಾ ಕೂಡ ಒಬ್ಬರು. ಅಲ್ಲದೇ ಈ ವಿಮಾನ ಖರೀದಿಗೆ ಫ್ರಾನ್ಸ್ನೊಂದಿಗೆ ಒಪ್ಪಂದವನ್ನು ಅಂತಿಮಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.
ಭದೌರಿಯಾ ಅವರು ಸೆಪ್ಟೆಂಬರ್ 2019 ರಿಂದ ಸೆಪ್ಟೆಂಬರ್ 2021 ರವರೆಗೆ ವಾಯುಪಡೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಭದೌರಿಯಾ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ವಾಯು ಸೇನಾ ಪದಕ, ರಾಷ್ಟ್ರಪತಿಗಳ ಪದಕ ಪಡೆದಿದ್ದಾರೆ.ಇವರು 4250 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದು, 26 ವಿವಿಧ ರೀತಿಯ ಫೈಟರ್ ವಿಮಾನಗಳನ್ನು ಹಾರಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಭದೌರಿಯಾ ಆ ರಾಜ್ಯದಿಂದಲೇ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ಹಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿಲ್ಲ. ಮೂಲಗಳ ಪ್ರಕಾರ ಹಾಲಿ ವಿಕೆ ಸಿಂಗ್ ಪ್ರತಿನಿಧಿಸುತ್ತಿರುವ ಗಾಜಿಯಾಬಾದ್ನಿಂದ ಭದೌರಿಯಾ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಅಲೋಚಿಸಿದೆ ಎನ್ನಲಾಗಿದೆ.