ದೆಹಲಿ, ಮಾ 23(DaijiworldNews/AA): ಇದೀಗ ರದ್ದಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಬಂಧನ ಮತ್ತು ಜಾರಿ ನಿರ್ದೇಶನಾಲಯ(ಇಡಿ) ಕಸ್ಟಡಿ ವಿಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ನ ಮೆಟ್ಟಿಲೇರಿದ್ದಾರೆ.
ಗುರುವಾರ ಕೇಂದ್ರ ತನಿಖಾ ಸಂಸ್ಥೆ ಕೇಜ್ರಿವಾಲ್ ಅವರನ್ನು ಬಂಧನ ಮಾಡಿತ್ತು. ಜೊತೆಗೆ ಮಾರ್ಚ್ 28 ರವರೆಗೆ ಕೇಜ್ರಿವಾಲ್ ಅವರ ಕಸ್ಟಡಿಗೆ ಇಡಿಗೆ ಅನುಮತಿ ನೀಡಿತ್ತು. ಇದೀಗ ತಮ್ಮ ಕಸ್ಟಡಿ ವಿಷಯಕ್ಕೆ ಸಂಬಂಧಿಸಿದಂತೆ ತುರ್ತು ವಿಚಾರಣೆಯನ್ನು ಕೋರಿ ದೆಹಲಿ ಹೈಕೋರ್ಟ್ಗೆ ಕೇಜ್ರಿವಾಲ್ ಮನವಿ ಸಲ್ಲಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆಯ ತನಿಖೆಯಲ್ಲಿ ಇಡಿ ಯಾವುದೇ ಬಲವಂತದ ಕ್ರಮದಿಂದ ಮಧ್ಯಂತರ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಇದಾದ ಕೆಲವೇ ಗಂಟೆಗಳ ಬಳಿಕ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿತ್ತು. ಶುಕ್ರವಾರ ಅವರನ್ನು ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರದ ತನಿಖೆಗೆ ಕೇಜ್ರಿವಾಲ್ ಅವರನ್ನು ಕಸ್ಟಡಿಗೆ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಇಡಿ ತಿಳಿಸಿದೆ. ಈ ಹಿನ್ನೆಲೆ ನ್ಯಾಯಾಧೀಶರು ಕೇಜ್ರಿವಾಲ್ ಅವರ ಕಸ್ಟಡಿಗೆ ಇಡಿಗೆ ಅನುಮತಿ ನೀಡಿದ್ದಾರೆ.