ಬೆಂಗಳೂರು, ಮಾ 22(DaijiworldNews/MS): ರಾಜ್ಯದ 5, 8, 9, 11ನೇ ತರಗತಿ ಬೋರ್ಡ್ ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ಪ್ರಕಟಿಸಿದ್ದು ಬೋರ್ಡ್ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ.
ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ವಿಚಾರ ಕುರಿತಂತೆ ಅನಿಶ್ಚಿತತೆ ಮುಂದುವರೆದಿತ್ತು.ಪ ರೀಕ್ಷೆ ರದ್ದಾಗುತ್ತದೆಯೇ ಅಥವಾ ನಡೆಯುತ್ತದೆಯೇ ಎಂಬುದರ ಕುರಿತಾಗಿ ಗೊಂದಲ ಮುಂದುವರೆದಿದ್ದು, ಮಕ್ಕಳು ಮತ್ತು ಪೋಷಕರ ಸ್ಥಿತಿ ಅಯೋಮಯವಾಗಿತ್ತು.ಇದೀಗ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿ ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ ಎಳೆದಿದೆ.
ರಾಜ್ಯ ಪಠ್ಯಕ್ರಮವಿರುವ ಶಾಲೆಗಳ 5,8,9 ಮತ್ತು 11ನೇ ತರಗತಿ ಮಕ್ಕಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಇತ್ತೀಚೆಗೆ ರದ್ದುಪಡಿಸಿ ಆದೇಶ ನೀಡಿತ್ತು. ಈ ತೀರ್ಪನ್ನು ಇಂದು ರದ್ದು ಮಾಡಿದೆ. ಏಕಸದಸ್ಯ ಪೀಠ ಶಾಲೆಗಳ ಬೋರ್ಡ್ ಪರೀಕ್ಷೆ ರದ್ದುಪಡಿಸಿತ್ತು. ವಿಭಾಗೀಯ ಪೀಠದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತ್ತು. ಹೀಗಾಗಿ ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಲು ಸುಪ್ರೀಂಕೋರ್ಟ್ ಸೂಚಿಸಿತ್ತು.