ಬೆಂಗಳೂರು, ಮಾ 19(DaijiworldNews/AK): ಅನಗತ್ಯವಾಗಿ ನೀರು ಪೋಲಾಗುವುದನ್ನ ತಡೆಯುವ ನಿಟ್ಟಿನಲ್ಲಿ ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳು, ಅಪಾರ್ಟ್ಮೆಂಟ್ಗಳಲ್ಲಿ, ಐಷಾರಾಮಿ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿನ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಈ ಏರಿಯೇಟರ್ ಗಳು ಕಡಿಮೆ ದರದಲ್ಲಿ ಮಾರುಕಟ್ಟೆ ಯಲ್ಲಿ ಲಭ್ಯವಿದ್ದು, ನೀರಿನ ಬಿಲ್ ಅನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಜಲಮಂಡಳಿ ಪ್ರಧಾನ ಕಚೇರಿಯಲ್ಲಿ ಬೆಂಗಳೂರು ನಗರ ಪ್ಲಂಬರ್ ಅಸೋಸಿಯೇಷನ್ ಪದಾಧಿಕಾರಿಗಳ ಜೊತೆ ಸಭೆಯಲ್ಲಿ ಮಾತನಾಡಿದ ಅವರು, ಏರಿಯೇಟರ್ ಅಳವಡಿಕೆ ಇಲ್ಲದೇ ಇರುವಂತಹ ನಲ್ಲಿಗಳಿಂದ ಹೆಚ್ಚಿನ ಪ್ರಮಾಣದ ನೀರು ಪೋಲಾಗುತ್ತದೆ. ಈ ನಲ್ಲಿಗಳಲ್ಲಿ ಏರಿಯೇಟರ್ ಅಳವಡಿಸುವುದರಿಂದ ಶೇಕಡಾ 60 ರಿಂದ 85 ರಷ್ಟು ನೀರಿನ ಉಳಿತಾಯ ಸಾಧ್ಯ. ಕರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಿಸಿದಂತೆ "ವಾಟರ್ ಟ್ಯಾಪ್ ಮಾಸ್ಕ್" ಗಳನ್ನು ಬಳಸುವುದು ಅಗತ್ಯವಾಗಿದೆ. ಇದನ್ನ ಅಳವಡಿಸುವುದು ಬಹಳ ಸುಲಭ ಪ್ರಕ್ರಿಯೆ ಆಗಿದ್ದು, ಜನರು ತಾವೇ ಅಳವಡಿಸಿಕೊಳ್ಳಬಹುದು. ಅಗತ್ಯವಿದ್ದರೆ ಮಾತ್ರ ಪ್ಲಂಬರ್ ಗಳ ಸಹಾಯ ಪಡೆಯಬಹುದು ಎಂದು ಹೇಳಿದರು.
ಮಾರ್ಚ್ 21 ರಿಂದ ಮಾರ್ಚ್ 31 ರ ವರೆಗೆ ಸ್ವಯಂ ಪ್ರೇರಿತರಾಗಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಸುವುದನ್ನ ಕಡ್ಡಾಯಗೊಳಿಸಲಾಗಿದೆ. 10 ದಿನಗಳಲ್ಲಿ ತಮಗೆ ಸಿಗುವ ಏರಿಯೇಟರ್ ಗಳನ್ನು ನಲ್ಲಿಗಳಿಗೆ ಅಳವಡಿಸಿಕೊಳ್ಳಬೇಕು. ಗಡುವಿನ ಅವಧಿಯಲ್ಲಿ ಈ ಏರಿಯೇಟರ್ (ವಾಟರ್ ಟ್ಯಾಪ್ ಮಾಸ್ಕ್ಗಳನ್ನು) ಅಳವಡಿಸಿಕೊಳ್ಳದೇ ಇರುವ ಕಟ್ಟಡ ಗಳಲ್ಲಿ ಜಲಮಂಡಳಿಯಿಂದ ಪರವಾನಗಿ ಹೊಂದಿರುವ ಪ್ಲಂಬರ್ ಗಳ ಸಹಾಯದಿಂದ ಏರಿಯೇಟರ್ ಗಳನ್ನು ಅಳವಡಿಸಲಾಗುವುದು ಮತ್ತು ಈ ವೆಚ್ಚವನ್ನು ಕಟ್ಟಡ ಮಾಲೀಕರಿಂದ ಭರಿಸುವಂತೆ ಸೂಚಿಸಲಾಗುವುದು ಎಂದು ಹೇಳಿದರು.
ಮನೆಯಲ್ಲಿ ಕೈತೊಳೆಯುವ, ಪಾತ್ರೆ ತೊಳೆಯುವ, ಶವರ್, ವಾಷ್ ಬೇಸಿನ್ ನಲ್ಲಿಗಳು ಸೇರಿದಂತೆ ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುವ ಕಡೆಗಳಲ್ಲಿ ಸಾರ್ವಜನಿಕರು ಏರಿಯೇಟರ್ ಗಳನ್ನು ಅಳವಡಿಸಿಕೊಳ್ಳಬೇಕು. ಈ ಉಪಕರಣ ಮಾರುಕಟ್ಟೆಯಲ್ಲಿ 60 ರೂಪಾಯಿಗಳಿಂದ ಲಭ್ಯವಿದೆ. ಇದರಿಂದ ಜನರ ಮನೆಯಲ್ಲಿ ನೀರಿನ ಬಳಕೆ ಗಣನೀಯವಾಗಿ ಕಡಿಮೆಯಾಗುತ್ತದೆ. ಹಾಗೆಯೇ, ನೀರಿನ ಬಿಲ್ ಕೂಡಾ ಕಡಿಮೆ ಆಗುತ್ತದೆ ಎಂದರು.