ರಾಮನಗರ, ಮಾ 19(DaijiworldNews/AK):ನಾನು ಯಾರಿಗೂ ವಿಷ ಹಾಕುವವರಲ್ಲ. ನಾನು ಎಲ್ಲರಿಗೂ ಒಳ್ಳೆಯದನ್ನ ಬಯಸುವವರು ಎಂದು ಹೇಳುವ ಮೂಲಕ ಹೆಚ್ ಡಿ ಕುಮಾರಸ್ವಾಮಿಗೆ ಸಂಸದ ಡಿ.ಕೆ ಸುರೇಶ್ ತಿರುಗೇಟು ನೀಡಿದ್ದಾರೆ.
ದೇವೇಗೌಡರ ಬದುಕಿಗೆ ವಿಷ ಹಾಕಿದ್ದೇ ಡಿ.ಕೆ.ಬ್ರದರ್ಸ್ ಎಂಬ ಹೆಚ್ಡಿಕೆ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಏನು ಮಾತನಾಡಿದ್ದಾರೋ ಗೊತ್ತಿಲ್ಲ. ಅವರ ಆರೋಗ್ಯ ಚೆನ್ನಾಗಿಲ್ಲ ಅಂತ ಆಸ್ಪತ್ರೆಗೆ ಹೋಗ್ತಿದ್ದಾರೆ. ಆದಷ್ಟು ಬೇಗ ಆಸ್ಪತ್ರೆಯಿಂದ ಗುಣಮುಖರಾಗಿ ಬರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ ಎಂದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗಿಫ್ಟ್ ಹಂಚಿಕೆ ಆರೋಪದ ಕುರಿತು ಮಾತನಾಡಿ, ಈ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಕುಮಾರಸ್ವಾಮಿ ಏನೇನ್ ಹೇಳ್ತಾರೋ ಗೊತ್ತಿಲ್ಲ. ಅವರಿಗೆ ಆಪರೇಷನ್ ಆಗಬೇಕು ಅಂತ ಆಸ್ಪತ್ರೆಗೆ ಹೋಗ್ತಿದ್ದಾರೆ, ಒಳ್ಳೆಯದಾಗಲಿ ಎಂದರು.ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಫ್ಯಾರ ಮಿಲಿಟರಿ ಕರೆಸಬೇಕೆಂಬ ವಿಚಾರ ಸಂಬಂಧ, ಯಾರನ್ನ ಬೇಕಾದ್ರೂ ಕರೆಸಲಿ. ಪ್ಯಾರ ಮಿಲಿಟರಿಯನ್ನೇ ಕರೆಸಲಿ, ಪ್ರಧಾನಿ ಮೋದಿಯನ್ನೇ ಕರೆಸಲಿ. ನಾನು ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ, ಕೂಲಿ ಕೇಳ್ತಿದ್ದೇನೆ ಎಂದು ಹೇಳಿದರು.
ಈ ಮಧ್ಯೆ ರಾಮನಗರದಲ್ಲಿ ಜೆಡಿಎಸ್ ಗೆ ಸಂಸದ ಡಿ.ಕೆ ಸುರೇಶ್ ಶಾಕ್ ಕೊಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದೆ. ಹಾರೋಹಳ್ಳಿ ಜೆಡಿಎಸ್ ಅಧ್ಯಕ್ಷ ಮಲ್ಲಪ್ಪ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಜೊತೆಗೆ ಹಾರೋಹಳ್ಳಿ ಭಾಗದ ಸುಮಾರು 30ಕ್ಕೂ ಹೆಚ್ಚು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.