ಲಕ್ನೋ, ಮಾ 19(DaijiworldNews/AA): ಮಗಳ ಸಾವಿನಿಂದ ಮನನೊಂದ ಪೋಷಕರು ಆಕೆಯ ಗಂಡನ ಮನೆಗೆ ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆದಿದೆ.
ಅಂಶಿಕಾ ಕೇಸರವಾಣಿ ಎಂಬಾಕೆಯ ವಿವಾಹ ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದಿದ್ದು, ಸೋಮವಾರ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ತನ್ನ ಅತ್ತೆಯ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಬಳಿಕ ಅಂಶಿಕಾ ಮನೆಯವರಿಗೆ ಪತಿ ಮನೆಯವರು ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ವಿಷಯ ತಿಳಿದ ಅಂಶಿಕಾ ಸಂಬಂಧಿಕರು ಆಕೆಯ ಅತ್ತೆ ಮನೆಗೆ ಧಾವಿಸಿದ್ದಾರೆ. ಈ ವೇಳೆ ಅಂಶಿಕಾ ಸಂಬಂಧಿಕರು ವರದಕ್ಷಿಣೆಗಾಗಿ ಕಿರುಕುಳ ನೀಡಿ ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ವಾಗ್ವಾದ ಆರಂಭವಾಗಿದ್ದು, ಸಿಟ್ಟಿಗೆದ್ದ ಅಂಶಿಕಾ ಮನೆಯವರು ಅಂಶಿಕಾ ಅತ್ತೆ-ಮಾವನನ್ನು ಮನೆಯ ಕೊಠಡಿಯಲ್ಲಿ ಬಂಧಿಸಿ, ಹೊರ ಬಂದು ಮನೆಗೆ ಬೆಂಕಿ ಹಚ್ಚಿದ್ದಾರೆ.
ಪೊಲೀಸರ ತಂಡ ಸ್ಥಳಕ್ಕಾಗಮಿಸಿದ ವೇಳೆ ಎರಡೂ ಕಡೆಯವರು ಜಗಳವಾಡುತ್ತಿದ್ದು, ತಕ್ಷಣವೇ ಐವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ದಳದವರು ಬೆಳಗಿನ ಜಾವ 3 ಗಂಟೆಗೆ ಬೆಂಕಿ ನಂದಿಸಿದ್ದು, ಈ ವೇಳೆ ಮನೆಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಅಂಶಿಕಾ ಮಾವ ರಾಜೇಂದ್ರ ಕೇಸರವಾಣಿ ಮತ್ತು ಅತ್ತೆ ಶೋಭಾ ದೇವಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.