ಗಡ್ಚಿರೋಲಿ, ಮಾ 19(DaijiworldNews/AA): ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದು ನಾಲ್ವರು ನಕ್ಸಲರು ಹತರಾದ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮುಂಬರುವ ಲೋಕಸಭಾ ಚುನಾವಣೆಯ ವೇಳೆ ಕಾನೂನು ಬಾಹಿರ ಕೃತ್ಯ ನಡೆಸುವ ಉದ್ದೇಶದಿಂದ ಕೆಲ ನಕ್ಸಲರು ತೆಲಂಗಾಣದಿಂದ ಪ್ರಾಣಹಿತ ನದಿ ದಾಟಿ ಗಡ್ಚಿರೋಲಿಗೆ ಪ್ರವೇಶಿಸಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆ ಮಹಾರಾಷ್ಟ್ರ ಪೊಲೀಸರ ವಿಶೇಷ ಸಿ-60 ಕಮಾಂಡೋಗಳು ಮತ್ತು ಸಿಆರ್ಪಿಎಫ್ ಕಮಾಂಡೋಗಳು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ಮಾಹಿತಿ ನೀಡಿದ್ದಾರೆ.
ಸಿ-60 ಘಟಕದ ತಂಡ ಇಂದು ಬೆಳಗ್ಗೆ ಕೋಲಮಾರ್ಕ ಪರ್ವತಗಳಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಈ ಸಂದರ್ಭ ನಕ್ಸಲರು ಮನಬಂದಂತೆ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ನಾಲ್ವರು ನಕ್ಸಲರನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೃತ ನಕ್ಸಲರನ್ನು ವಿವಿಧ ನಕ್ಸಲ್ ಸಮಿತಿಗಳ ಕಾರ್ಯದರ್ಶಿಗಳಾದ ವರ್ಗೀಶ್, ಮಾಗ್ತು ಮತ್ತು ಪ್ಲಾಟೂನ್ ಸದಸ್ಯರಾದ ಕುರ್ಸಂಗ್ ರಾಜು ಮತ್ತು ಕುಡಿಮೆಟ್ಟ ವೆಂಕಟೇಶ್ ಎಂದು ಗುರುತಿಸಲಾಗಿದೆ. ಮೃತ ನಕ್ಸಲರಿಂದ ಎಕೆ 47 ರೈಫಲ್, ಎರಡು ದೇಶ ನಿರ್ಮಿತ ಪಿಸ್ತೂಲ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.