ನವದೆಹಲಿ, ಮಾ 18(DaijiworldNews/AA): ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದ ಸೀಟು ಹಂಚಿಗೆ ಇನ್ನೂ ಅಂತಿಮವಾಗಿಲ್ಲ ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ. ಈ ರೀತಿಯ ಹೇಳಿಕೆ ನೀಡುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.
ಬಿಜೆಪಿ ಹಾಗೂ ಮೈತ್ರಿ ಪಕ್ಷ ಜೆಡಿಎಸ್ ನಡುವೆ ಮಂಡ್ಯ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಸಂಬಧಿಸಿದಂತೆ ಗುದ್ದಾಟ ನಡೆಯುತ್ತಿದೆ. ಹೀಗಾಗಿ ಇಂದು ಬಿಜೆಪಿ ರಾಷ್ಟ್ರೀಯ ನಾಯಕ ಜೆಪಿ ನಡ್ಡಾ ಅವರು ಸುಮಾಲತಾ ಅಂಬರೀಶ್ ಅವರನ್ನು ಕರೆದು ಸಮಾಲೋಚನೆ ನಡೆಸಿದರು. ಜೊತೆಗೆ ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿದ್ದು, ಬೇರೆ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ಸುಮಾಲತಾ ಅವರಿಗೆ ಆಫರ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಜೆಪಿ ನಡ್ಡಾ ಅವರನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗಿನ ಒಂದು ದು ಸುದೀರ್ಘವಾದ ಸಮಾಲೋಚನೆ ಮುಕ್ತಾಯವಾಗಿದೆ. ಮಂಡ್ಯ ಕ್ಷೇತ್ರದ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ನಾನು ಮಂಡ್ಯ ಕ್ಷೇತ್ರದಿಂದಲೇ ಟಿಕೆಟ್ ನೀಡಲು ಕೇಳಿದ್ದೇನೆ. ಇಂದು ನಡೆಯುವ ಸಭೆಯ ಬಳಿಕ ನಿರ್ಧಾರವಾಗಲಿದೆ. ನಿಮ್ಮನ್ನ ಮತ್ತು ನಿಮ್ಮ ಕಾರ್ಯಕರ್ತರನ್ನ ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆ ಇಲ್ಲ ಎಂದು ನನಗೆ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ನನ್ನ ಮುಂದಿನ ನಿರ್ಧಾರವನ್ನ ಕ್ಷೇತ್ರಕ್ಕೆ ತೆರಳಿ ನಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ ಮಾಡುತ್ತೇನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷದಿಂದ ದೂರ ಹೋಗುವ ಪ್ರಶ್ನೆ ಇಲ್ಲ. ನನ್ನ ಸಂಸತ್ ಅವಧಿ ಮುಕ್ತಾಯದ ನಂತರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದರು.