ಶಿವಮೊಗ್ಗ, 1(DaijiworldNews/ AK): ದೆಹಲಿ ಕಾಂಗ್ರೆಸ್ ನಾಯಕರಿಗೆ ಕರ್ನಾಟಕ ಸರ್ಕಾರ ಎಟಿಎಂ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸೂಪರ್ ಸಿಎಂ, ಸ್ಯಾಡೋ ಸಿಎಂ, ವೈಟಿಂಗ್ ಸಿಎಂ ಇದ್ದಾರೆ ಎಂದು ಹೇಳುವ ಮೂಲಕ ಮೋದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ , ಯತೀಂದ್ರ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಶಿವಮೊಗ್ಗದ ಫ್ರೀಡಂಪಾರ್ಕ್ನ ಅಲ್ಲಮಪ್ರಭು ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಸಿಗಂದೂರು ಚೌಡೇಶ್ವರಿ ದೇವಿಯನ್ನು ಸ್ಮರಿಸಿದರು. ಬಳಿಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಜನರನ್ನು ಲೂಟಿ ಮಾಡುವುದು, ತಮ್ಮ ಜೇಬು ಭರ್ತಿ ಮಾಡುವುದು ಕಾಂಗ್ರೆಸ್ ಗುರಿ. ಕಾಂಗ್ರೆಸ್ ಕರ್ನಾಟಕವನ್ನು ತನ್ನ ಎಟಿಎಂ ಮಾಡಿಕೊಂಡಿದೆ. ಇನ್ನು ಹೀಗೆ ಲೂಟಿ ಮಾಡಿದರೆ ಅವರಿಗೆ ಸರ್ಕಾರ ನಡೆಸಲು ಹಣ ಎಲ್ಲಿದೆ? ಇಲ್ಲಿ ಶ್ಯಾಡೋ ಸಿಎಂ, ಸೂಪರ್ ಸಿಎಂ, ವೈಟಿಂಗ್ ಸಿಎಂಗಳ ಮಧ್ಯೆ ದೆಹಲಿಯಲ್ಲಿ ಒಬ್ಬ ಕಲೆಕ್ಷನ್ ಮಂತ್ರಿ ಕೂಡಾ ಇದ್ದಾರೆ ಎಂದರು.
ಮುಂಬೈನ ಶಿವಾಜಿಪಾರ್ಕ್ನಲ್ಲಿ ನಿನ್ನೆ ಕಾಂಗ್ರೆಸ್ ಸಭೆಯಲ್ಲಿ ಒಂದು ನಿರ್ಣಯ ಮಾಡಿದ್ದಾರೆ. ಹಿಂದೂ ಸಮಾಜದ ಶಕ್ತಿಯನ್ನು ತೊಡೆದು ಹಾಕುವುದಾಗಿ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದರು. ಅಲ್ಲದೆ, ಈ ನಿರ್ಣಯದಿಂದ ಬಾಳಾಸಾಹೇಬ್ ಠಾಕ್ರೆಯವರ ಆತ್ಮಕ್ಕೆ ಎಷ್ಟು ದುಃಖವಾಗಿರಲಕ್ಕಿಲ್ಲ? ಎಂದು ಕೇಳಿದ ಮೋದಿ, ನಮ್ಮ ಶಕ್ತಿಯನ್ನು ಹೆಚ್ಚಿಸುವ ಕೆಲಸ ನಾವು ಮಾಡಬೇಕಿದೆ ಎಂದರು.