ಬೆಂಗಳೂರು, 17(DaijiworldNews/ AK): ಚುನಾವಣಾ ಬಾಂಡ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೆಗೆದುಕೊಂಡ ನಿರ್ಣಯದಿಂದ ಮೋದಿ ಅವರ ನೈತಿಕತೆಯ ಮುಖವಾಡ ಕಳಚಿಬಿದ್ದಿದೆ ಎಂದು ಕೈಗಾರಿಕಾ ಸಚಿವ ಎಂ .ಬಿ. ಪಾಟೀಲ್ ಟೀಕಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೋದಿಯವರು, 'ನಾನೂ ತಿನ್ನುವುದಿಲ್ಲ ತಿನ್ನುವುದಕ್ಕೂ ಬಿಡುವುದಿಲ್ಲ ಎಂದು ಹೇಳುತ್ತಾ ಹುಸಿ ವರ್ಚಸ್ಸು ಸೃಷ್ಟಿಸಿಕೊಂಡಿದ್ದರು.ಆದರೆ ಆ ಹುಸಿ ವರ್ಚಸ್ಸಿಗೆ ಈಗ ಸರಿಯಾದ ಹೊಡೆತ ಬಿದ್ದಿದೆ ಎಂದು ಹೇಳಿದರು.
ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಳಿಗೆ ಒಳಗಾದ ನಂತರ ಅಥವಾ ಗುತ್ತಿಗೆಗಳನ್ನು ಪಡೆದ ನಂತರ ಬಿಜೆಪಿ ಹೆಸರಲ್ಲಿ ಚುನಾವಣಾ ಬಾಂಡ್ ತೆಗೆದುಕೊಂಡಿರುವುದು ಬಹಿರಂಗಗೊಂಡಿದೆ. ಇದರಿಂದಾಗಿ, ಭ್ರಷ್ಟಾಚಾರ, ನೈತಿಕತೆಯ ಬಗ್ಗೆ ಪ್ರಸ್ತಾಪಿಸುತ್ತಿದ್ದ ಮೋದಿ ಅವರ ನಿಜವಾದ ಬಣ್ಣ ಏನು ಎಂಬುದು ಗೊತ್ತಾಗಿದೆ ಎಂದರು.
'ಚುನಾವಣಾ ಬಾಂ ಡ್ ರೂಪದಲ್ಲಿ ಕಾಂ ಗ್ರೆಸ್ ಪಕ್ಷಕ್ಕೂ ಒಂದಷ್ಟು ಹಣ ಬಂದಿದೆ. ಆದರೆ, ಅದು ಸಹಜವಾಗಿ ಬಂದಿರುವಂಥದ್ದು. ಅದು ಯಾವುದೇ ಇಡಿ, ಸಿಬಿಐ ಇನ್ನಿತರ ಸಂಸ್ಥೆಗಳನ್ನು ಬಳಸಿಕೊಂಡು ಬೆದರಿಕೆ ಹಾಕಿ ವಸೂಲಿ ಮಾಡಿರುವಂಥದ್ದಲ್ಲ ಎಂದು ಸಮರ್ಥಿಸಿದರು.