ಪತ್ತನಂತಿಟ್ಟ, ಮಾ 15(DaijiworldNews/AK):ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಕೇರಳದ ಪತ್ತನಂತಿಟ್ಟದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಆ್ಯಂಟನಿ ಪರ ಪ್ರಚಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮೋದಿ, ರಾಜ್ಯದ ಜನ ಭ್ರಷ್ಟ ಮತ್ತು ಅಸಮರ್ಥ ಸರ್ಕಾರದಿಂದ ಬೇಸತ್ತಿದ್ದು, ಈ ಬಾರಿ ಕೇರಳದಲ್ಲಿ ಕಮಲ ಅರಳಲಿದೆ ಎಂದು ಹೇಳಿದರು.
ಇದೇ ವೇಳೆ ಎಡಪಕ್ಷಗಳು ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, ಎಲ್ಡಿಎಫ್ ಮತ್ತು ಯುಡಿಎಫ್ ಸರ್ಕಾರಗಳನ್ನು ಕಿತ್ತೊಗೆದರೆ ಮಾತ್ರ ನಿಮಗೆ ಪ್ರಯೋಜನವಾಗಲಿದೆ .ಕಾಂಗ್ರೆಸ್ ಪಕ್ಷದ್ದು ಸೋಲಾರ್ ಹಗರಣ ಆಗಿದ್ದರೆ, ಎಲ್ಡಿಎಫ್ನದ್ದು ಚಿನ್ನದ ಹಗರಣ. ಅಕ್ರಮ ರಾಜಕೀಯ ಮತ್ತು ತಾರತಮ್ಯವೇ ಎರಡೂ ಪಕ್ಷಗಳ ಉದ್ದೇಶ ಎಂದು ಮೋದಿ ಕಾಂಗ್ರೆಸ್ ಮತ್ತು ಎಲ್ಡಿಎಫ್ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಮಲಯಾಳಿಗಳು ಪ್ರಗತಿಪರ ಚಿಂತನೆಯವರು. ಕಾಂಗ್ರೆಸ್ ಮತ್ತು ಎಲ್ ಡಿಎಫ್ ಪುರಾತನ ಕಾಲದ ಚಿಂತನೆಯುಳ್ಳವರು ಮತ್ತು ಅಧಿಕಾರವನ್ನು ಮಾತ್ರ ಗುರಿಯಾಗಿಸಿಕೊಂಡ ರಾಜಕೀಯ ಪಕ್ಷಗಳು ಎಂದಿಗೂ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲಾರವು ಎಂದು ಹೇಳಿದರು.