ಬೆಂಗಳೂರು, ಮಾ 15(DaijiworldNews/AA): ಚುನಾವಣಾ ಬಾಂಡ್ ಮೂಲಕ ಸಂಗ್ರಹಿಸಿರುವ ದೇಣಿಗೆಯ ವಿವರಗಳು ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿರುವುದರಿಂದ ಬಹಿರಂಗವಾಗಿವೆ. ಚುನಾವಣಾ ಬಾಂಡ್ ವ್ಯವಸ್ಥೆಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿರುವುದು ಬಯಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣಾ ಬಾಂಡ್ಗಳ ಮೂಲಕ ರಾಜಕೀಯ ಪಕ್ಷಗಳು ದೇಣಿಗೆ ಸಂಗ್ರಹ ಮಾಡಿರುವ ಬಗ್ಗೆ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ಉನ್ನತಮಟ್ಟದ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು. ಒಟ್ಟು ಖರೀದಿಸಲ್ಪಟ್ಟ ಚುನಾವಣಾ ಬಾಂಡ್ಗಲ್ಲಿ ಶೇ. 50ರಷ್ಟು ಬಿಜೆಪಿಗೆ ಸಂದಾಯವಾಗಿವೆ. ಈ ಮೂಲಕ ಬಿಜೆಪಿ ಭಾರೀ ಮೊತ್ತದ ಹಣ ಸಂಗ್ರಹಿಸಿದೆ. ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣ ಸಂಗ್ರಹಿಸಿದೆ. ಆದ್ದರಿಂದ ಬಿಜೆಪಿಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಬೇಕು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ನಾನು ಲಂಚ ತೆಗೆದುಕೊಳ್ಳುವುದಿಲ್ಲ. ತೆಗೆದುಕೊಳ್ಳಲು ಬಿಡುವುದಿಲ್ಲ ಎನ್ನುತ್ತಿದ್ದರು. ಐ.ಟಿ ಇಲಾಖೆ, ಇ.ಡಿ, ಸಿಬಿಐನಂತಹ ತನಿಖಾ ಸಂಸ್ಥೆಗಳ ಮೂಲಕ ಬೆದರಿಕೆ ಹಾಕಿ ಚುನಾವಣಾ ಬಾಂಡ್ಗಳನ್ನು ಪಡೆದಿರುವುದು ಬಹಿರಂಗವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಶೇ.11ರಷ್ಟು ಚುನಾವಣಾ ಬಾಂಡ್ಗಳು ಬಂದಿವೆ. ಆದರೆ, ಬಿಜೆಪಿ ಪಕ್ಷದಂತೆ ಒತ್ತಡ ಹೇರಿ ಹಣ ವಸೂಲಿ ಮಾಡಿಲ್ಲ. ಬಾಂಡ್ ವಿಚಾರದಲ್ಲಿ ಬಿಜೆಪಿ ಏನೆಲ್ಲಾ ಮಾಡಿದೆ ಎಂದು ಬಯಲಾಗಬೇಕು ಎಂದು ತಿಳಿಸಿದ್ದಾರೆ.