ಬೆಂಗಳೂರು, ಮಾ 14(DaijiworldNews/ AK): ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಸಿಕ್ಕ ಬೆನ್ನಲ್ಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಜಿ ಸಿಎಂ ಹಾಗೂ ಕ್ಷೇತ್ರದ ಹಾಲಿ ಸಂಸದ ಸದಾನಂದ ಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಲೋಕಸಭಾ ಚುನಾವಣೆಗೆ ಸಹಕಾರ ನೀಡುವಂತೆ ಶೋಭಾ ಅವರು ಕೇಳಿಕೊಂಡಿದ್ದಾರೆ.
ಕಳೆದ ಬಾರಿ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅವರಿಗೆ ಈ ಬಾರಿ ಆ ಕ್ಷೇತ್ರದಿಂದ ಸ್ಪರ್ಧಿಸಲು ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿತ್ತು. ಈಗ ಅವರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ. ಇತ್ತ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದಲೂ ಅವರಿಗೆ ಗೋ ಬ್ಯಾಕ್ ಬಿಸಿ ತಟ್ಟಿತ್ತು. ಆದರೂ ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಉತ್ತರದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಶೋಭಾ , ದೆಹಲಿ ನಾಯಕರ ಮೇಲೆ ನನಗೆ ವಿಶ್ವಾಸ ಇತ್ತು. ಅವರು ಯಾವ ಜವಾಬ್ದಾರಿ ನನಗೆ ವಹಿಸಿದ್ರು, ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಯಾವುದೇ ರಾಜ್ಯದ ಚುನಾವಣೆಯಾಗಲಿ, ಯಾವುದೇ ಇಲಾಖೆ ಆಗಲಿ ಅಲ್ಲೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆ. ಈ ಕಾರಣಕ್ಕೆ ನನ್ನ ನಾಯಕತ್ವವನ್ನು ಗುರುತಿಸಿ ಟಿಕೆಟ್ ಕೊಟ್ಟಿದ್ದಾರೆ ಎಂದರು.
ಇನ್ನಾದರೂ ಪಕ್ಷ ವಿರೋಧಿ ಚಟುವಟಿಕೆ ಮಾಡುವವರು ಪಾಠ ಕಲಿಯಲಿ. ಬಿಜೆಪಿ ಒಂದು ಶಿಸ್ತಿನ ಪಕ್ಷವಾಗಿದೆ. ಇದರಿಂದ ನನಗೆ ನಿಜಕ್ಕೂ ಆನಂದವಾಗಿದೆ. ನಾನು ಬೆಂಗಳೂರಲ್ಲಿ ಶಾಸಕಿಯಾಗಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಸದಾನಂದಗೌಡರ ಮನೆಗೆ ಹೋಗಿ ಬಂದಿದ್ದೇನೆ. ಎಲ್ಲರ ಆಶೀರ್ವಾದ ನನ್ನ ಮೇಲಿದೆ. ಇಲ್ಲಿ ವಿರೋಧ ಇಲ್ಲ ಎಂದು ಹೇಳಿದರು.